ಎಚ್.ಡಿ.ಕೋಟೆ: ಜೆಡಿಎಸ್ ನ 'ಜನತಾ ಜಲಧಾರೆ' ಯಾತ್ರೆಗೆ ದೇವೇಗೌಡ ಚಾಲನೆ

ಮೈಸೂರು, ಎ.16: ರಾಜ್ಯದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮತ್ತು ಜಲ ಸಂರಕ್ಷಣೆ ಉದ್ದೇಶದಿಂದ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ 'ಜನತಾ ಜಲಧಾರೆ' ಯಾತ್ರೆಗೆ ಎಚ್.ಡಿ.ಕೋಟೆಯ ಕಬಿನಿ ಜಲಾಶಯದ ಬಳಿ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ದೇವೇಗೌಡ, ನಮ್ಮ ಪಕ್ಷದ ಎಲ್ಲ ಮುಖಂಡರು ಸೇರಿ 'ಜನತಾ ಜಲಧಾರೆ' ಕಾರ್ಯಕ್ರಮ ಆಯೋಜಿಸಿದ್ದಾರೆ. ಕಬಿನಿ ಜಲಾಶಯದಿಂದಲೇ ಪ್ರಾರಂಭ ಮಾಡಿದ್ದೇವೆ. ರಾಜ್ಯದ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ರಾಜ್ಯಾದ್ಯಂತ ನಡೆಯುವ ಜನತಾ ಜಲಧಾರೆ ಯಾತ್ರೆಯಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಹೇಳಿದರು.
ನಾನು ಶಕ್ತಿ ಮೀರಿ ಈ ಭಾಗದ ಜನತೆಗೆ ನೀರಿಗಾಗಿ ಹೋರಾಟ ಮಾಡಿ ಆಗಿದೆ. ನನಗೀಗ 90 ವರ್ಷ. ಆದರೆ ಈಗಲೂ ನೀರಿನ ವಿಚಾರದಲ್ಲಿ ಜನರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ದೇವೇಗೌಡ ನುಡಿದರು.
ಕರ್ನಾಟಕಕ್ಕೆ ನೀರಾವರಿ ವಿಚಾರದಲ್ಲಿ ವಂಚನೆ ಆಗುತ್ತಿದೆ. ಟ್ರಿಬ್ಯುನಲ್ ಆ್ಯಕ್ಟ್ ಬಗ್ಗೆ ಬಿಜೆಪಿಯಾಗಲಿ, ಕಾಂಗ್ರೆಸ್ ನವರಾಗಲಿ ಮಾತನಾಡಿಲ್ಲ. ಇದು ನಮ್ಮ ರಾಜ್ಯದ ದುರಾದೃಷ್ಟ ಎಂದು ಅವರು ಹೇಳಿದರು.
ನಾನು ಒಬ್ಬ ರೈತನಾಗಿ ಈ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದೇನೆ ನನ್ನ ಕಾಲಿನಲ್ಲಿ ಶಕ್ತಿ ಇಲ್ಲ, ಆದರೆ ನನ್ನ ತಲೆಯಲ್ಲಿ ಶಕ್ತಿ ಇದೆ, ನಿಮ್ಮ ಜೊತೆ ನಾನು ಇದ್ದೇನೆ ಎಂದು ದೇವೇಗೌಡ ನುಡಿದರು.
"ಜನತಾ ಜಲಧಾರೆ" ಮಹಾಯಾತ್ರೆಗೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಬಳಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಚಾಲನೆ ನೀಡಿದರು. ಅಲ್ಲಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆ.ಆರ್.ಎಸ್ ನಲ್ಲೂ ಯಾತ್ರೆಗೆ ಚಾಲನೆ ನೀಡಲಾಯಿತು.
15 ಜೀವನದಿಗಳಿಂದ ಏಕಕಾಲಕ್ಕೆ ಪುಣ್ಯ ಜಲ ಸಂಗ್ರಹಿಸಿಕೊಳ್ಳುವ ಮಹತ್ಕಾರ್ಯದಲ್ಲಿ ನಿಮ್ಮೆಲ್ಲರ ಸಹಕಾರವನ್ನು ಕೋರಿಕೊಳ್ಳುತ್ತೇನೆ. ನದಿ ಮೂಲಗಳು ಬತ್ತದಂತೆ ಕಾಪಾಡುವುದೇ ನಮ್ಮ ದೃಢಸಂಕಲ್ಪ ಎಂದು ಜೆಡಿಎಸ್ ಮುಖಂಡ, ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದರು.



















