ಈಶ್ವರಪ್ಪರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಿ: ಡಾ. ಪರಮೇಶ್ವರ್
ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಈಶ್ವರಪ್ಪ ಪ್ರತಿಕೃತಿ ದಹಿಸಿ ಪ್ರತಿಭಟನೆ

ಮಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಶ್ವರಪ್ಪ ಕೊನೆಗೂ ತಪ್ಪನ್ನು ಒಪ್ಪಿ ರಾಜೀನಾಮೆ ನೀಡಿದ್ದಾರೆ. ಈಗ ಅವರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಇಂದು ಈಶ್ವರಪ್ಪನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಜರಗಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಒತ್ತಾಯ ಮಾಡಿದರು.
ಬಿಜೆಪಿ ಯಾವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂಬುದನ್ನು ದೇಶ, ರಾಜ್ಯದ ಜನತೆ ಕಂಡಿದ್ದಾರೆ. ರಾಜ್ಯದಲ್ಲಿ ಇಂತಹ ಭ್ರಷ್ಟಾಚಾರ ಹಿಂದೆಂದೂ ಆಡಳಿತ ನಡೆಸಿದ ಸರಕಾರದಲ್ಲಿ ಕಂಡಿಲ್ಲ. ಪ್ರಧಾನಿ ಮೋದಿಯವರು ಸಿದ್ದರಾಮಯ್ಯ ಸರಕಾರವನ್ನು ೧೦ ಪರ್ಸೆಂಟ್ ಸರಕಾರ ಎಂದು ಆರೋಪಿಸಿದ್ದರು. ಆದರೆ ತಮ್ಮದೇ ಪಕ್ಷದ ಸರಕಾರದ ಸಚಿವರ ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷರೇ ಒಂದು ವರ್ಷದ ಹಿಂದೆ 40 ಪರ್ಸೆಂಟ್ ಲಂಚದ ಆರೋಪ ಮಾಡಿದ್ದರೂ ಪ್ರಧಾನಿ ಮೌನ ವಹಿಸಿದ್ದರು. ಇದರ ಪರಿಣಾಮವಾಗಿಯೇ ಈ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಂತು. ಈ ಮೂಲಕ ಪ್ರಧಾನಿ ಮೋದಿಯವರು ಭ್ರಷ್ಟ ಸರಕಾರವನ್ನು ರಕ್ಷಣೆ ಮಾಡುತ್ತಿರುವುದನ್ನು ಸಾಬೀತುಪಡಿಸಿದೆ ಎಂದು ಡಾ. ಪರಮೇಶ್ವರ್ ಆರೋಪಿಸಿದರು.
ಭ್ರಷ್ಟಾಚಾರ, ಲಂಚ ಆರೋಪದ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಚರ್ಚೆಗೆ ಅವಕಾಸ ನೀಡಬೇಕೆಂದರೂ ನೀಡಲಿಲ್ಲ. ಅದರ ಪರಿಣಾಮವಾಗಿ ರಾಜ್ಯಾದ್ಯಂತ ಬೀದಿಗಿಳಿದು ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಈಶ್ವರಪ್ಪರ ಮನೆ, ಕಚೇರಿಗೆ ಬಂದು ಮನವಿ ಮಾಡಿದ್ದರೂ ತಮಗೆ ಅವರ ಪರಿಚಯವೇ ಇಲ್ಲ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ತಾವು ಕೇಳಿದ 40 ಪರ್ಸೆಂಟ್ ಕೊಟ್ಟಿಲ್ಲ ಎಂದು ಬಿಲ್ ಕ್ಲಿಯರ್ ಮಾಡದೆ, ಅನುಮತಿ ಪತ್ರ ಕೊಡಿಸದ ಕಾರಣ ಗುತ್ತಿಗೆದಾರ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಈಶ್ವರಪ್ಪ ತಪ್ಪು ಮಾಡಿದ್ದು ಒಪ್ಪಿ ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ಸರಕಾರದ ವಿರುದ್ಧವೇ ತನಿಖೆ ನಡೆಸುವಂತೆ ಕೋರಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದೆ. ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಮಾತ್ರವಲ್ಲದೆ ಮೃತ ಗುತ್ತಿಗೆದಾರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಡಾ. ಪರಮೇಶ್ವರ್ ಆಗ್ರಹಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಪ್ರಕರಣದ ಬಗ್ಗೆ ಈಶ್ವರಪ್ಪರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುಟಿ ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜಾ ಮಾತನಾಡಿದರು.
ಪ್ರತಿಭಟನೆಯ ವೇಳೆ ಈಶ್ವರಪ್ಪರ ಪ್ರತಿಕೃತಿಯನ್ನು ದಹಿಸಲಾಯಿತು. ಜತೆಗೆ ಕಾರ್ಯಕರ್ತರೊಬ್ಬ ಈಶ್ವರಪ್ಪರ ಧಿರಿಸು ಮುಖವಾಡ ಹಾಕಿ ಅಣುಕು ಪ್ರದರ್ಶನ ನೀಡಿದರು. ಮಿನಿ ವಿಧಾನ ಸೌಧದ ಎದುರು ಕಾರ್ಯಕರ್ತರು ಕೆಲ ನಿಮಿಷಗಳ ಕಾಲ ರಸ್ತೆ ತಡೆ ಮಾಡಿ ಬಿಜೆಪಿ ಸರಕಾರ ಹಾಗೂ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥ ಭಂಡಾರಿ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಪಿ.ವಿ. ಮೋಹನ್, ಶಾಲೆಟ್ ಪಿಂಟೋ, ಅಪ್ಪಿ, ಶಾಹುಲ್ ಹಮೀದ್, ಟಿ.ಕೆ. ಸುಧೀರ್, ನಝೀರ್ ಬಜಾಲ್, ಬಿ. ಇಬ್ರಾಹಿಂ, ಇನಾಯತ್ ಅಲಿ, ಕೃಪಾ ಆಳ್ವಾ, ರಕ್ಷಿತ್ ಶಿವರಾಮ್, ಡಾ. ರಘು, ಸುರೇಶ್ ಬಳ್ಳಾಲ್, ಶಶಿಧರ್ ಹೆಗಡೆ, ಕೆ. ಹರಿನಾತ್, ಎಂಎಸ್ ಮುಹಮ್ಮದ್, ಮುಹಮ್ಮದ್ ಮೋನು, ವಿಶ್ವಾಸ್ ಕುಮಾರ್ ದಾಸ್, ಮೋಹನ್ ಗೌಡ, ಶುಭಾಷ್ ಚಂದ್ರ, ವೆಂಕಪ್ಪ ಗೌಡ, ಶುಭೋದಯ ಆಳ್ವಾ, ಸವಾದ್ ಸುಳ್ಯ ಹಾಗೂ ವಿವಿಧ ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕ ಅಧ್ಯಕ್ಷರು, ಇತರ ನಾಯಕರು ಉಪಸ್ಥಿತರಿದ್ದರು.