ಮರಗೋಡಿನಲ್ಲಿ ಗ್ರಾಮಸ್ಥರಿಂದ ಸೆಸ್ಕ್ ಜೆಇಗೆ ದಿಗ್ಬಂಧನ : ಸಮಸ್ಯೆ ಪರಿಹಾರದ ಭರವಸೆ
ಮಡಿಕೇರಿ: ಹದಗೆಟ್ಟ ವಿದ್ಯುತ್ ವ್ಯವಸ್ಥೆಯಿಂದ ಬೇಸತ್ತ ಮರಗೋಡು ಗ್ರಾಮಸ್ಥರು ಮೂರ್ನಾಡು ಜೆಇ ಮಹೇಶ್ ಅವರಿಗೆ ದಿಗ್ಬಂಧನ ವಿಧಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಾಲ್ಕು ದಿನಗಳ ಹಿಂದೆ ಸುರಿದ ಸಾಮಾನ್ಯ ಮಳೆಗೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಕೆಟ್ಟು ನಿಂತಿದೆ. ಇದನ್ನು ಸರಿಪಡಿಸಲು ಗ್ರಾಮಕ್ಕೆ ಪ್ರತ್ಯೇಕವಾಗಿ ಲೈನ್ ಮೆನ್ ಕೂಡ ಇರುವುದಿಲ್ಲ. ಹಾಗಾಗಿ ಗ್ರಾಮಸ್ಥರು ಕತ್ತಲಿನಲ್ಲಿಯೇ ದಿನದೂಡುವಂತಾಗಿತ್ತು. ಈ ಎಲ್ಲಾ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಮೂರ್ನಾಡಿಗೆ ತೆರಳಿ ಸೆಸ್ಕ್ ಜೆಇ ಮಹೇಶರನ್ನು ಮರಗೋಡಿ ಕರೆ ತಂದಿದ್ದಾರೆ. ಬಳಿಕ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಅಸಿಸ್ಟೆಂಟ್ ಎಗ್ಸಿಕ್ಯೂಟಿವ್ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರದ ಭರವಸೆ ನೀಡುವವರೆಗೂ ಜೆಇಯನ್ನು ಇಲ್ಲಿಂದ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು, ಸಾಮಾನ್ಯ ಮಳೆಗೆ ಹೀಗಾದರೆ ಮುಂದಿನ ಮಳೆಗಾಲದಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ಗ್ರಾಮಸ್ಥರ ಆಗ್ರಹಕ್ಕೆ ಮಣಿದ ಸೆಸ್ಕ್ ಅಸಿಸ್ಟೆಂಟ್ ಎಗ್ಸಿಕ್ಯೂಟಿವ್ ಎಂಜಿನಿಯರ್ ವಿನಯ್ ಕುಮಾರ್ ಮಡಿಕೇರಿಯಿಂದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಮರಗೋಡು ಗ್ರಾಮಕ್ಕೆ ಪ್ರತ್ಯೇಕ ಲೈನ್ ಮೆನ್ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಈಗಿರುವ ಜೂನಿಯರ್ ಎಂಜಿನಿಯರ್ ರನ್ನು ಬದಲಿಸಿ ನೂತನ ಅಧಿಕಾರಿಯನ್ನು ನೇಮಿಸುವ ಆಶ್ವಾಸನೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ದಿಗ್ಬಂಧನ ಹಿಂಪಡೆದರು.
ಈ ಸಂದರ್ಭ ಮರಗೋಡು ಗ್ರಾ.ಪಂ ಸದಸ್ಯ ಪರಿಚನ ಶರತ್, ಬಳಪದ ಮೋಹನ್, ಇಟ್ಟಣಿಕೆ ನಾಗೇಶ್, ನಂದಕುಮಾರ್ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.







