ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಆಫರ್ ನಂತರ ʼಪಾಯ್ಸನ್ ಪಿಲ್ʼ ತಂತ್ರಗಾರಿಕೆ ಅನುಸರಿಸಲು ಮುಂದಾದ ಕಂಪೆನಿ

ನ್ಯೂಯಾರ್ಕ್ : ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು 43.4 ಬಿಲಿಯನ್ ಡಾಲರ್‍ಗೆ ಖರೀದಿಸುವ ಆಫರ್ ಅನ್ನು ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ಮಾಡಿದ ನಂತರ ಟ್ವಿಟ್ಟರ್‍ನ ಆಡಳಿತ ನಿರ್ದೇಶಕರ ಮಂಡಳಿ ʼಪಾಯ್ಸನ್ ಪಿಲ್ʼ ತಂತ್ರಗಾರಿಕೆ ಅನುಸರಿಸಲು ಸರ್ವಾನುಮತದಿಂದ ನಿರ್ಧರಿಸಿದೆ.
ಪಾಯ್ಸನ್ ಪಿಲ್ ರಕ್ಷಣೆ ತಂತ್ರಜ್ಞಾನವು ಅಧಿಕೃತವಾಗಿ ಶೇರ್‍ಹೋಲ್ಡರ್ ರೈಟ್ಸ್ ಪ್ಲಾನ್ ಎಂದು ಕರೆಯಲ್ಪಡುತ್ತದೆ. ಇದರನ್ವಯ ಹಾಲಿ ಷೇರುದಾರರು ಒಂದು ಕಂಪನಿಯಿಂದ ಹೆಚ್ಚುವರಿ ಷೇರುಗಳನ್ನು ರಿಯಾಯಿತಿ ದರದಲ್ಲಿ ಪಡೆಯಲಿದ್ದಾರೆ. ಇದರಿಂದಾಗಿ ಮೂರನೇ ವ್ಯಕ್ತಿಗೆ ಸಂಸ್ಥೆಯನ್ನು ಖರೀದಿಸುವುದು ದುಬಾರಿಯಾಗಲಿದೆ. ಕಂಪೆನಿಗೆ ಇಷ್ಟವಿಲ್ಲದೇ ಇರುವವರು ಖರೀದಿಸಲು ಮುಂದಾದರೆ ಇಂತಹ ತಂತ್ರಗಾರಿಕೆಗಳನ್ನು ಕೆಲ ಕಂಪೆನಿಗಳು ಅನುಸರಿಸುತ್ತವೆ.
ಟ್ವಿಟ್ಟರ್ ನಲ್ಲಿ ಮಸ್ಕ್ ಅವರ ಪಾಲು ಪ್ರಸ್ತುತ ಶೇ 9ರಷ್ಟಾಗಿದ್ದು ಅದು ಶೇ 15ಕ್ಕಿಂತ ಹೆಚ್ಚಾದರೆ ಈ ತಂತ್ರಗಾರಿಕೆ ಅನುಸರಿಸುವ ಸಾಧ್ಯತೆಯಿದೆ. ಬಹಿರಂಗ ಮಾರ್ಕೆಟ್‍ನಿಂದ ಷೇರುಗಳನ್ನು ಯಾವುದೇ ವ್ಯಕ್ತಿ ಯಾ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಖರೀದಿಸುವುದನ್ನು ಈ ರೈಟ್ಸ್ ಪ್ಲಾನ್ ತಡೆಯುತ್ತದೆ.





