ಪುತ್ತೂರು: ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ಬೈಕ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬೇರಿಕೆ ಎಂಬಲ್ಲಿ ಶನಿವಾರ ಸಂಜೆಯ ಸುಮಾರಿಗೆ ನಡೆದಿದೆ.
ಬೈಕ್ ಚಾಲನೆ ಮಾಡುತ್ತಿದ್ದ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆ ಎಂಬಲ್ಲಿನ ನಿವಾಸಿ ಅಶ್ವತ್ಥ್ ಮೃತರು ಎಂದು ಗುರುತಿಸಲಾಗಿದ್ದು, ಬೈಕ್‍ನಲ್ಲಿದ್ದ ಸಹಸವಾರ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ವರ್ಷಿತ್ (18) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ವತ್ಥ್ ಮತ್ತು ವರ್ಷಿತ್ ಸ್ನೇಹಿತರಾಗಿದ್ದು, ಅವರಿಬ್ಬರೂ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಅಶ್ವತ್ಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ವರ್ಷಿತ್ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ವಾಹನ ಚಾಲಕರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಮೃತ ಅಶ್ವತ್ಥ್ ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







