ಜನರನ್ನು ಅಲೆದಾಡುವಂತೆ ಮಾಡಬೇಡಿ ಅಧಿಕಾರಿಗಳಿಗೆ ದ.ಕ. ಡಿಸಿ ಡಾ. ರಾಜೇಂದ್ರ ಸೂಚನೆ
ಜಿಲ್ಲಾಧಿಕಾರಿಯಿಂದ ಜನರ ಅಹವಾಲು ಸ್ವೀಕಾರ

ಪುತ್ತೂರು: ಸರಕಾರಿ ದಾಖಲೆ, ಸೌಲಭ್ಯಗಳಿಗಾಗಿ ಜನರನ್ನು ಅಲೆದಾಡುವಂತೆ ಮಾಡಬಾರದು. ಸರಿಯಾದ ಸಮಯಕ್ಕೆ ಅರ್ಹರಿಗೆ ದಾಖಲೆ ಮತ್ತು ಸೌಲಭ್ಯಗಳನ್ನು ತಲುಪಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಕಾನೂನು ಬದ್ಧವಾಗಿರುವ ವಿಲೇವಾರಿ ಮಾಡಲು ಅವಕಾಶ ಇರುವ ಎಲ್ಲಾ ಕಡತಗಳು ಕೂಡಲೇ ವಿಲೇವಾರಿ ಮಾಡಬೇಕು. ಅಕ್ರಮ ಸಕ್ರಮ, 94 ಸಿ ಹಕ್ಕು ಪತ್ರ ನೀಡಿದ ಮೇಲೆ ಆರ್‌ಟಿಸಿ ಮತ್ತು 9/11ನಲ್ಲಿ ದಾಖಲಾತಿ ಮಾಡಬೇಕು. ಜನರನ್ನು ಅಲೆದಾಡುವಂತೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಒಂದೊಂದು ಭಾಗದ ಎಲ್ಲಾ ಅಕ್ರಮ ಸಕ್ರಮ ಕಡತಗಳನ್ನು ತಯಾರಿಸಿ ಪಂಚಾಯತ್‌ನಲ್ಲಿ ಪ್ರಚುರಪಡಿಸಬೇಕು. ಆಕ್ಷೇಪಣೆ ಇದ್ದರೆ ಅದನ್ನು ಅಕ್ರಮ ಸಕ್ರಮ ಸಮಿತಿಯ ಮುಂದೆ ಇಟ್ಟು ಅಲ್ಲಿ ವಿಲೇವಾರಿ ಆಗಬೇಕು. ಅದಕ್ಕೆ ವ್ಯವಸ್ಥೆ ಆಗಬೇಕು ಎಂದು ಆದೇಶ ನೀಡಿದರು.
ಸರ್ವೋದಯ ಪ್ರೌಢ ಶಾಲೆಯ ಮೈದಾನ ಅರಣ್ಯ ಬಫರ್ ವ್ಯಾಪ್ತಿಯಲ್ಲಿದೆ ಎಂದು ಶಾಲೆಗೆ ಮಂಜೂರಾತಿ ಆಗಿಲ್ಲ ಎಂದು ಶಾಲಾ ಆಡಳಿತ ಅಧ್ಯಕ್ಷ ಶಿವರಾಮ ಅವರು ಹೇಳಿದರು. ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಬಡಗನ್ನೂರು ಕಜೆಮೂಲೆ ಮೋರಿ ನಿರ್ಮಾಣ ಮಾಡುವ ಬಗ್ಗೆ ಎರಡು ವಾರದಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಜೆಮೂಲೆ, ಮೈಗುಳಿ ರಸ್ತೆ ತುಂಬಾ ಅವಶ್ಯಕತೆ ಇರುವಲ್ಲಿ ಅಭಿವೃದ್ಧಿ ಮಾಡಲು ಅನುದಾನ ನೀಡಲಾಗುವುದು ಉಳಿದ ಭಾಗದ ಅಭಿವೃದ್ಧಿ ಆದ್ಯತೆಯ ಮೇರೆಗೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅರಣ್ಯದ ಮೂಲಕ ಹಾದು ಹೋಗುವ ಈಗಾಗಲೇ ಇರುವ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಜಿಲ್ಲಾಧಿಕಾರಿ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದರು. ಕಿಂಡಿ ಅಣೆಕಟ್ಟುಗಳ ಕಸ, ಮರ ಇದ್ದರೆ ಅದನ್ನು ತೆರವು ಮಾಡಲು ಕ್ರಿಯಾ ಯೋಜನೆ ರೂಪಿಸಲು ಕ್ರಮ ಮಾಡಲು ಸೂಚನೆ ನೀಡಲಾಯಿತು.
ನಿರ್ವಹಣೆಗೆ ಹಣ ಇಲ್ಲದೆ ಕಿಂಡಿ ಅಣೆಕಟ್ಟು ಹಾಳಾಗಿ ಹೋಗುತ್ತದೆ. ಹಿಂದೆ ಮಾಡಿದ ಡ್ಯಾಂ ನಿರ್ವಹಣೆಗೆ ಕ್ರಮ ಆಗಬೇಕು ಎಂದು ಶಾಸಕರು ಹೇಳಿದರು. ಬಡಗನ್ನೂರು ಪಟ್ಟೆ ಎಂಬಲ್ಲಿ ವೆಂಟೆಡ್ ಡ್ಯಾಂ ನಿರ್ವಹಣೆಯ ಬಗ್ಗೆ ಚರ್ಚೆ ನಡೆದು ವೆಂಟೆಡ್ ಡ್ಯಾಂ ನಿರ್ವಹಣೆಗೆ ಸ್ಥಳಿಯರು ಮತ್ತು ಗ್ರಾಮ ಪಂಚಾಯತ್ ಸೇರಿ ಕ್ರಿಯಾ ಯೋಜನೆ ರೂಪಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಅಕ್ರಮ ಸಕ್ರಮ ಕೊಡ್ತಾ ಇದ್ದರು. ಈಗ ಅರಣ್ಯ ಅಡ್ಡಿಯಿಂದ ದೊರೆಯುತ್ತಾ ಇಲ್ಲಾ ಎಂದು ರೈತ ಸಂಘದವರು ಜಿಲ್ಲಾಧಿಕಾರಿಗಳ ಅವರ ಗಮನಕ್ಕೆ ತಂದರು. ಅರಣ್ಯ, ಕಂದಾಯ ಜಂಟಿ ಸರ್ವೆ ಮಾಡಿ ಕಂದಾಯ, ಅರಣ್ಯ ಪ್ರತ್ಯೇಕ ಮಾಡಿ ಆಕ್ಷೇಪಣೆ ಸರಿ ಮಾಡಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಹಲವು ಗ್ರಾಮದಲ್ಲಿ ಈ ರೀತಿಯ ಸಮಸ್ಯೆ ಇದೆ ಜಂಟಿ ಸರ್ವೆ ಮಾಡಿ ಕಂದಾಯ, ಅರಣ್ಯ ಭೂಮಿ ಬೇರ್ಪಡಿಸಬೇಕು ಶಾಸಕ ಸಂಜೀವ ಮಠಂದೂರು ಹೇಳಿದರು.ಮರಗಳನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಜನರಿಗೆ ಮಾಹಿತಿ, ಸಲಹೆ ನೀಡಿ ಜನರೂ ಪರಿಸರ ಬೆಳೆಯಲು ಸಹಕಾರ ನೀಡುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಅರಣ್ಯ ಇಲಾಖೆಗೆ ಸಲಹೆ ನೀಡಿದರು.
ಗ್ರಾಮದ ಕಚ್ಚಾ ರಸ್ತೆಗಳ ಅಭಿವೃದ್ಧಿ ಬಗ್ಗೆ ಒಂದು ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ಶಾಸಕರಿಗೆ ಸಲ್ಲಿಸಿ ಅನುದಾನದ ಲಭ್ಯತೆಗೆ ಅನುಸಾರವಾಗಿ ಅನುದಾನ ನೀಡಲಾಗುವುದು.
ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕರ್ನಾಟಕದಲ್ಲಿ ಅಧ್ಯಯನ ಮಾಡುತ್ತಿರುವ ಕೇರಳದ ಭಾಗದ ಗಡಿಗ್ರಾಮದ ಎಸ್‌ಸಿ ಎಸ್‌ಟಿ ಮಕ್ಕಳಿಗೆ ಕರ್ನಾಟಕದಲ್ಲಿ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂಬ ಬಗ್ಗೆ ಚರ್ಚೆ ನಡೆಯಿತು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. ಮುಗುಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಕೂಡಲೇ ಕ್ರಮಕ್ಕೆ ಸೂಚಿಸಲಾಯಿತು. ಕಲ್ಲುಗುಡ್ಡೆ, ಕರ್ಪುಡಿಕಾನ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುತಿದೆ ಎಂದು ಸಾರ್ವಜನಿಕರು ದೂರಿದರು. ಈ ಕುರಿತು ಪತಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸುಳ್ಯಪದವಿನಲ್ಲಿ ಆರೋಗ್ಯ ಕೇಂದ್ರ, ಪಶು ಆರೋಗ್ಯ ಕೇಂದ್ರ, ಮೊಬೈಲ್ ಟವರ್, ಬ್ಯಾಂಕಿಂಗ್ ಮತ್ತು ಇತರ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಆಗುವ ಕೆಲಸ ಆದ್ಯತೆಯ ಮೇರೆಗೆ ಮಾಡಲಾಗುವುದು. ಸರಕಾರಿ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.