ಮಂಗಳೂರು: ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತದ ವಿರುದ್ಧ ಬಂಕ್ ಮಾಲಕರಿಂದ ಮತ್ತೆ ಪ್ರತಿಭಟನೆ

ಮಂಗಳೂರು : ನಯಾರಾ ಪೆಟ್ರೋಲಿಯಂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ನಯಾರಾಸ್ ಪೆಟ್ರೋಲ್ ಡೀಲರ್ಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ತಣ್ಣೀರುಬಾವಿಯಲ್ಲಿ ಮತ್ತೆ ಎರಡನೆ ಬಾರಿಗೆ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.
ಮಾ,31ರಂದು ಪ್ರತಿಭಟನೆ ನಡೆಸಿದ್ದರಲ್ಲದೆ ಇಂಧನ ಸಚಿವರಿಗೂ ಮನವಿ ಸಲ್ಲಿಸಿದ್ದರು. ಬಳಿಕ ಎ.12 ಮತ್ತು 13ರಂದು ಮತ್ತೆ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ನಯಾರಾ ಪೆಟ್ರೋಲಿಯಂ ಕಂಪನಿಯವರು ರಾಜ್ಯದಲ್ಲಿ ತಮ್ಮ ಅಧೀನದ ಪೆಟ್ರೋಲ್ ಬಂಕ್‌ಗಳಿಗೆ ಪೆಟ್ರೋಲ್, ಡೀಸೆಲ್ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದರಿಂದ ಮತ್ತು ಮಾರುಕಟ್ಟೆ ಬೆಲೆಗಿಂತ 2 ರೂ. ಹೆಚ್ಚಿಸಿ ಭಾರೀ ನಷ್ಟ ಉಂಟಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದ್ದರು.
ಎಲ್ಲಾ ಡೀಲರ್‌ಗಳೂ ಮುಂಗಡ ಹಣ ಪಾವತಿಸಿ ಇಂಧನಕ್ಕೆ ಆರ್ಡರ್ ಮಾಡಿದರೂ ಕೂಡ ಸಕಾಲಕ್ಕೆ ಪೂರೈಕೆ ಮಾಡಲಾಗುತ್ತಿಲ್ಲ. ತಣ್ಣೀರುಬಾವಿಯಲ್ಲಿರುವ ನಯಾರಾ ಕಂಪನಿಯ ಸಹವರ್ತಿ ಸಂಸ್ಥೆ ಏಜಿಸ್‌ನವರ ಇಂಧನ ಸಂಗ್ರಹಣಾಗಾರದಲ್ಲಿ ಲಕ್ಷಾಂತರ ಲೀಟರ್ ಪೆಟ್ರೋಲ್, ಡೀಸೆಲ್ ಸಂಗ್ರಹಿಸಿ ಇರಿಸಲಾಗಿದ್ದರೂ ಅದನ್ನು ವಿತರಣೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಕಂಪೆನಿಯ ವಲಯ ವ್ಯವಸ್ಥಾಪಕ ಗಣೇಶ್ ಗೌಡ ಮತ್ತು ಡಿಡಿಎಂ ಸುಮಿತ್ ಬೆಹ್ರಾ ಪ್ರತಿಭಟನಾ ನಡೆದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಅಲ್ಲದೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಅಸೋಸಿಯೇಶನ್‌ನ ಗೌರವಾಧ್ಯಕ್ಷ ರಾಜು ತಲ್ಲೂರು, ಅಧ್ಯಕ್ಷ ಕೊಟ್ರೇಶ್ ನಾಯ್ಕ್, ಉಪಾಧ್ಯಕ್ಷರಾದ ಸುನೀಲ್ ಕ್ಸೇವಿಯರ್, ಚಂದ್ರಶ್ರೇಖರ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಝಾಹೀರ್ ಪಾಟೀಲ್, ಜೊತೆ ಕಾರ್ಯದರ್ಶಿ ರಘುನಾಥ್ ಮತ್ತಿತರರು ವಹಿಸಿದ್ದರು.







