ಶ್ರೀಲಂಕಾದಲ್ಲಿ ಹದಗೆಟ್ಟ ಅರ್ಥವ್ಯವಸ್ಥೆ: ಪ್ರತಿಭಟನೆಗೆ ಜತೆಯಾದ ಮಾಜಿ ಕ್ರಿಕೆಟ್ ನಾಯಕ ರಣತುಂಗ, ಜಯಸೂರ್ಯ

ಅರ್ಜುನ ರಣತುಂಗ | PTI
ಕೊಲಂಬೊ, ಎ.16: ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿರುವುದರ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಗೊತಬಯ ರಾಜಪಕ್ಸ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೀದಿ ಪ್ರತಿಭಟನೆಗೆ ಈಗ ಅಲ್ಲಿನ ಖ್ಯಾತ ಮಾಜಿ ಕ್ರಿಕೆಟಿಗರಾದ ಅರ್ಜುನ ರಣತುಂಗ ಮತ್ತು ಸನತ್ ಜಯಸೂರ್ಯ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ಆಟ ಶ್ರೀಲಂಕಾದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ದೇಶದ ಇತರ ಕ್ರಿಕೆಟಿಗರೂ ಜತೆಯಾಗಬೇಕು ಎಂದು ಕ್ರಿಕೆಟ್ ತಂಡದ ಮಾಜಿ ನಾಯಕರಾದ ರಣತುಂಗ, ಜಯಸೂರ್ಯ ಕರೆ ನೀಡಿದ್ದಾರೆ.
ಕೊಲಂಬೊದಲ್ಲಿ ಅಧ್ಯಕ್ಷರ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಣತುಂಗ ‘ ಕ್ರಿಕೆಟ್ ಆಟಕ್ಕೆ ಪ್ರೇಕ್ಷಕರ ಬೆಂಬಲವಿದೆ. ಸಮಸ್ಯೆಯಿಂದ ಬೆಂದು ಬಸವಳಿದ ನಮ್ಮ ಬೆಂಬಲಿಗರು ಈಗ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವಾಗ ನಾವು ಅವರನ್ನು ಬೆಂಬಲಿಸಬೇಕಾಗಿದೆ. ಅದು ನಮ್ಮ ಕರ್ತವ್ಯ. ಕ್ರೀಡಾಕ್ಷೇತ್ರದ ತಾರೆಯರು ಪ್ರತಿಭಟನೆಯಲ್ಲಿ ಖುದ್ದು ಪಾಲ್ಗೊಳ್ಳಬೇಕುʼ ಎಂದರು.
ಆ ಬಳಿಕ ಮಾತನಾಡಿದ ಮತ್ತೊಬ್ಬ ಮಾಜಿ ನಾಯಕ ಜಯಸೂರ್ಯ, ನಿಮ್ಮ ಸಂದೇಶ ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. ಇದು ಅಧಿಕಾರಿಗಳ ಕಿವಿಗೆ ಬೀಳಲಿದೆ ಮತ್ತು ನಮ್ಮೆಲ್ಲರಿಗೆ ಉಜ್ವಲ ಭವಿಷ್ಯ ಖಾತರಿಯಾಗುವ ನಿರೀಕ್ಷೆಯಿದೆ ಎಂದರು. ಇದಕ್ಕೆ ಪ್ರತಿಯಾಗಿ, ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ‘ಗೊತಬಯ ಮನೆಗೆ ತೆರಳಲಿ’ ಎಂದು ಘೋಷಣೆ ಕೂಗಿದರು.
ರಣತುಂಗ ಮತ್ತು ಜಯಸೂರ್ಯ ಪ್ರತಿಭಟನೆಯಲ್ಲಿ ವೈಯಕ್ತಿಕವಾಗಿ ಪಾಲ್ಗೊಂಡ ಮೊದಲ ಮಾಜಿ ಕ್ರಿಕೆಟ್ ನಾಯಕರೆನಿಸಿಕೊಂಡರು. ಇದಕ್ಕೂ ಮುನ್ನ ಮತ್ತೊಬ್ಬ ಮಾಜಿ ನಾಯಕ ಮಹೆಲಾ ಜಯವರ್ಧನ ಪ್ರತಿಭಟನೆಗೆ ತಮ್ಮ ಬೆಂಬಲ ಘೋಷಿಸಿ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿದ್ದರೆ ಕುಮಾರ ಸಂಗಕ್ಕರ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದರೂ ಸರಕಾರದ ವಿರುದ್ಧ ಹೇಳಿಕೆ ನೀಡಿರಲಿಲ್ಲ.
ಮತ್ತೊಬ್ಬ ಅಂತರಾಷ್ಟ್ರೀಯ ಕ್ರಿಕೆಟಿಗ, ಐಸಿಸಿ ಮ್ಯಾಚ್ ರೆಫ್ರೀ ಆಗಿರುವ ರೋಷನ್ ಮಹಾನಾಮ, ಶ್ರೀಲಂಕಾದ ಈಗಿನ ಪರಿಸ್ಥಿತಿಯನ್ನು ರೋಬರ್ಟ್ ಮುಗಾಬೆ ಅವಧಿಯ ಜಿಂಬಾಬ್ವೆಗೆ ಹೋಲಿಸಿದ್ದು, ಅಧ್ಯಕ್ಷ ಗೊತಬಯ ರಾಜಪಕ್ಸ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.
ಈ ಮಧ್ಯೆ, ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ 2ನೇ ವಾರಕ್ಕೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿರುವ ಅಧ್ಯಕ್ಷರ ಕಚೇರಿಗೆ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಧ್ಯಕ್ಷರ ಕಚೇರಿ ಇರುವ ಕಟ್ಟಡದ ಬಳಿ ಹಲವಾರು ಟ್ರಕ್ ಗಳನ್ನು ನಿಲ್ಲಿಸಲಾಗಿದ್ದು ಮುಂದಿನ ವಾರ ಮತ್ತಷ್ಟು ಮಂದಿ ಪ್ರತಿಭಟನೆಯಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







