ಚಾರ್ಮಾಡಿ; ಸರಕಾರಿ ಬಸ್ - ಕಾರು ನಡುವೆ ಅಪಘಾತ : ಮೂವರಿಗೆ ಗಾಯ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕಾರಿಗೆ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದವರು ಹುಬ್ಬಳಿಯ ಮೂಲದವರು ಎಂದು ತಿಳಿದುಬಂದಿದ್ದು, ರಜೆ ಇದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇತರ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ವಾಪಸ್ ಹುಬ್ಬಳಿ ಕಡೆ ಹೋಗುತ್ತಿದ್ದಾಗ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ಮೂಡಿಗೆರೆಯಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಸರಕಾರಿ ಬಸ್ ಢಿಕ್ಕಿ ಹೊಡೆದಿದೆ.
ಈ ವೇಳೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಬಸ್ ಚರಂಡಿಗೆ ಇಳಿದಿದೆ. ಕಾರಿನಲ್ಲಿದ್ದ ಚಾಲಕ ಪ್ರತೀಕ್ (30), ರಾಜೇಶ್ ಬೆಳ್ಳಿವರಿ (44) ಮತ್ತು ಅವರ ಪತ್ನಿ ಸ್ವಂತಿಕಾ ಬೆಳ್ಳಿವರಿ (35) ಗಾಯಗೊಂಡಿದ್ದು, ಅವರನ್ನು ಕಕ್ಕಿಂಜೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.