ಅಸ್ಸಾಂ: ಭಾರೀ ಮಳೆ, ಬಿರುಗಾಳಿ; 8 ಸಾವು, 20 ಸಾವಿರ ಮಂದಿ ಸಂತ್ರಸ್ತರು

ಸಾಂದರ್ಭಿಕ ಚಿತ್ರ
ಅಸ್ಸಾಂ, ಎ. 16: ಅಸ್ಸಾಂನಲ್ಲಿ ಕಳೆದ 48 ಗಂಟೆಗಳ ಕಾಲ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. 592 ಗ್ರಾಮಗಳಲ್ಲಿ 20 ಸಾವಿರ ಜನರು ಸಂತ್ರಸ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಪ್ರಿಲ್ 14ರಿಂದ ಎಪ್ರಿಲ್ 15 (ರಾತ್ರಿ 8 ಗಂಟೆ) ವರೆಗೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.
‘ಭಾರೀ ಮಳೆ ಹಾಗೂ ಚಂಡ ಮಾರುತದಿಂದ ಎಪ್ರಿಲ್ 15ರಂದು ದಿಬ್ರುಗಢ ಜಿಲ್ಲೆಯ ಟಿಂಗ್ಖೋಂಗ್ ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಎಪ್ರಿಲ್ 14ರಂದು ಬಾರ್ಪೇಟ ಜಿಲ್ಲೆಯಲ್ಲಿ ಮೂವರು ಹಾಗೂ ಗೋಲ್ಪಾರ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಗೋಲ್ಪಾರ, ಬಾರ್ಪೇಟ, ದಿಬ್ರುಗಢ, ಕಾಮ್ರೂಪ್ (ಮೆಟ್ರೊ), ನಲ್ಬರಿ, ಚಿರಾಂಗ್, ದರ್ರಾಂಗ್, ಕ್ಯಾಚರ್, ಗೋಲಾಘಾಟ್, ಕರ್ಬಿ, ಅಂಗ್ಲೋಂಗ್, ಉದಲ್ಗುರಿ, ಕಾಮ್ರೂಪ್ ಜಿಲ್ಲೆಯ 592 ಗ್ರಾಮಗಳ ಒಟ್ಟು 20,286 ಜನರು ಸಂತ್ರಸ್ತರಾಗಿದ್ದಾರೆ ಎಂದು ಎಎಸ್ಡಿಎಂಎ ತಿಳಿಸಿದೆ.
ದಿಬ್ರುಗಢ ಜಿಲ್ಲೆಯ ಟಿಂಗ್ಖೋಂಗ್ ಪ್ರದೇಶದಲ್ಲಿ ಬಿರುಗಾಳಿಗೆ ಬಿದಿರುಗಳು ಬುಡಮೇಲಾದ ಪರಿಣಾಮ ಒರ್ವ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಗೋಲ್ಪಾರ ಜಿಲ್ಲೆಯಲ್ಲಿ ಮಾಟಿಯಾ ಪ್ರದೇಶದಲ್ಲಿ ಸಿಡಿಲು ಬಡಿದು 15 ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದಾನೆ.
5809 ಕಚ್ಚಾ ಮನೆಗಳು, 655 ಪಕ್ಕಾ ಮನೆಗಳು ಭಾಗಶಃ ಹಾನಿಗೀಡಾಗಿವೆ. 853 ಕಚ್ಚಾ ಮನೆಗಳು, 27 ಪಕ್ಕಾ ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ ಎಂದು ಎಎಸ್ಡಿಎಂಎ ವರದಿ ತಿಳಿಸಿದೆ.







