ಪ್ರೊ. ಆ್ಯಮಿ ವ್ಯಾಕ್ಸ್ ಹೇಳಿಕೆಗೆ ಭಾರತೀಯ ಅಮೆರಿಕನ್ ಮುಖಂಡರ ಖಂಡನೆ
ವಾಷಿಂಗ್ಟನ್, ಎ.16: ಅಮೆರಿಕದ ಪೆನಿಸಿಲ್ವೇನಿಯಾ ವಿವಿಯ ಪ್ರೊಫೆಸರ್ ಆ್ಯಮಿ ವ್ಯಾಕ್ಸ್ ಅವರು ಏಶ್ಯನ್ ಅಮೆರಿಕನ್ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಅದರಲ್ಲೂ ವಿಶೇಷವಾಗಿ ಭಾರತೀಯ ಅಮೆರಿಕನ್ನರ ಬಗ್ಗೆ ನೀಡಿರುವ ತಿರಸ್ಕಾರದ ಹೇಳಿಕೆಗೆ ಪ್ರಮುಖ ಭಾರತೀಯ ಅಮೆರಿಕನ್ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಕೊನೆಗೊಂಡ ಬಳಿಕ ಇತರರನ್ನು ‘ಹೊಲಸು’ ಎಂದು ಕರೆಯುವ ದಿನ ಮುಗಿದಿದೆ ಎಂದು ಭಾವಿಸಿದ್ದೆ. ಓರ್ವ ಭಾರತೀಯ ಅಮೆರಿಕನ್ ವಲಸಿಗರಾಗಿ, ಪ್ರೊಫೆಸರ್ ಆ್ಯಮಿ ವ್ಯಾಕ್ಸ್ ಅವರಿಂದ ಈ ಮಾತನ್ನು, ಭಾರತೀಯ ಅಮೆರಿಕನ್ ವಲಸಿಗರು ಮತ್ತು ಬಿಳಿಯರಲ್ಲದ ಅಮೆರಿಕನ್ನರ ಕುರಿತ ವಿಶ್ಲೇಷಣೆಯನ್ನು ಕೇಳಲು ಅಸಹ್ಯವೆನಿಸುತ್ತದೆ ಮತ್ತು ಇದು ವಲಸೆ ಸುಧಾರಣೆಯ ಸಾಧನೆಗೆ ಅಡ್ಡಿಯಾಗಲಿದೆ ಎಂದು ಅಮೆರಿಕದ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
ಈ ರೀತಿಯ ಹೇಳಿಕೆ ದ್ವೇಷ ಮತ್ತು ಭೀತಿಯಿಂದ ಹುಟ್ಟುತ್ತದೆ ಮತ್ತು ನನ್ನ ಕ್ಷೇತ್ರದ ಮತದಾರರಿಗೆ ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಹಾನಿಯುಂಟು ಮಾಡುತ್ತದೆ ಎಂದವರು ಹೇಳಿದ್ದಾರೆ.
ಪಾಶ್ಚಿಮಾತ್ಯ ಜನರ ಅಸಾಧಾರಣ ಕೊಡುಗೆ ಮತ್ತು ಸಾಧನೆಗಾಗಿ ಕರಿಯರು ಮತ್ತು ಪಾಶ್ಚಿಮಾತ್ಯೇತರ ಗುಂಪಿನವರಲ್ಲಿ ಅಪಾರ ಪ್ರಮಾಣದ ಅಸಮಾಧಾನ ಮತ್ತು ಅಸೂಯೆ ಮನೆಮಾಡಿದೆ. ಭಾರತದಿಂದ ಬರುವ ಬ್ರಾಹ್ಮಣ ಮಹಿಳೆಯರು, ಇಲ್ಲಿ ಯಶಸ್ಸಿನ ಏಣಿಯನ್ನು ಏರುತ್ತಾರೆ. ಉತ್ತಮ ಶಿಕ್ಷಣ ಪಡೆಯುತ್ತಾರೆ, ನಾವು ಅವರಿಗೆ ಉತ್ತಮ ಅವಕಾಶ ನೀಡಿದರೂ ಅವರು ‘ಅಮೆರಿಕನ್ನರು ಜನಾಂಗೀಯ ದ್ವೇಷಿಗಳು, ಅಮೆರಿಕ ಭೀಕರ ದೇಶ, ಅವರು ಸುಧಾರಿಸಬೇಕು’ ಎಂದು ಹೇಳಿಕೊಂಡು ತಿರುಗುತ್ತಾರೆ. ತಾವು ಬ್ರಾಹ್ಮಣರಾಗಿರುವುದರಿಂದ ಇತರರಿಗಿಂತ ಶ್ರೇಷ್ಟರು ಎಂದು ಅವರು ನಮಗೆ ತಿಳಿಹೇಳುತ್ತಾರೆ. ಆದರೆ ಅವರ ದೇಶ ಮಾತ್ರ ದರಿದ್ರ, ಹೊಲಸು’ ಎಂದು ಇತ್ತೀಚೆಗೆ ಫಾಕ್ಸ್ ನ್ಯೂಸ್ ಗೆ ನೀಡಿದ್ದ ಸಂದರ್ಶನದಲ್ಲಿ ಪ್ರೊ. ಆ್ಯಮಿ ವ್ಯಾಕ್ಸ್ ಹೇಳಿದ್ದರು.
ಪ್ರೊಫೆಸರ್ ವ್ಯಾಕ್ಸ್ ಹೇಳಿಕೆಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದ್ದು ಬಿಳಿಯರು ಶ್ರೇಷ್ಟರು ಎಂಬ ಮನೋಭಾವದ ಪ್ರಚಾರ ಇದು. ಓರ್ವ ಕಾಲೇಜು ಪ್ರೊಫೆಸರ್ ಈ ರೀತಿಯ ದ್ವೇಷ ಭಾವನೆ ಪ್ರಚೋದಿಸುವ ಹೇಳಿಕೆ ನೀಡುವುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ.







