ಡೆಲ್ಲಿ ಕ್ಯಾಪಿಟಲ್ಸ್ ಕೆಡವಿದ ಆರ್‌ಸಿಬಿ
ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ

ಮುಂಬೈ, ಎ.16: ಡೇವಿಡ್ ವಾರ್ನರ್ ಅರ್ಧಶತಕದ(66 ರನ್, 38 ಎಸೆತ, 4 ಬೌಂ.,5 ಸಿ.)ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧದ ಐಪಿಎಲ್‌ನ 27ನೇ ಪಂದ್ಯದಲ್ಲಿ 16 ರನ್‌ಗಳ ಅಂತರದಿಂದ ಸೋಲುಂಡಿದೆ.
ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು. ಗೆಲ್ಲಲು 190 ರನ್ ಗುರಿ ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದೆ.
ಆರ್‌ಸಿಬಿ ಪರ ಜೋಶ್ ಹೇಝಲ್‌ವುಡ್(3-28) ಹಾಗೂ ಮುಹಮ್ಮದ್ ಸಿರಾಜ್(2-31) ಐದು ವಿಕೆಟ್‌ಗಳನ್ನು ಹಂಚಿಕೊಂಡಿದ್ದ್ದಾರೆ.
ಔಟಾಗದೆ 66 ರನ್(34 ಎಸೆತ, 5 ಬೌಂಡರಿ,5 ಸಿಕ್ಸರ್) ಗಳಿಸಿದ ಕಾರ್ತಿಕ್ ಕೆಕೆಆರ್ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಮ್ಯಾಕ್ಸ್‌ವೆಲ್ 34 ಎಸೆತಗಳಲ್ಲಿ 55 ರನ್(7 ಬೌಂಡರಿ,2 ಸಿಕ್ಸರ್) ಕಲೆ ಹಾಕಿದರು. ಆರಂಭಿಕ ಬ್ಯಾಟರ್‌ಗಳಾದ ಎಫ್‌ಡು ಪ್ಲೆಸಿಸ್(8) ಹಾಗೂ ಅನುಜ್ ರಾವತ್(0)ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಮಾಜಿ ನಾಯಕ ವಿರಾಟ್ ಕೊಹ್ಲಿ(12 ರನ್) ಹಾಗೂ ಸುಯಾಶ್ ಪ್ರಭುದೇಸಾಯಿ(6) ಬೇಗನೆ ವಿಕೆಟ್ ಒಪ್ಪಿಸಿದರು. ಪ್ರಭುದೇಸಾಯಿ ಜೊತೆಗೆ 4ನೇ ವಿಕೆಟ್‌ಗೆ 35 ರನ್ ಸೇರಿಸಿದ ಮ್ಯಾಕ್ಸ್‌ವೆಲ್ ತಂಡವನ್ನು ಆಧರಿಸಿದರು.
ಕೇವಲ 26 ಎಸೆತಗಳಲ್ಲಿ 4 ಬೌಂಡರಿ,4 ಸಿಕ್ಸರ್ ನೆರವಿನಿಂದ 50 ರನ್ ಪೂರೈಸಿದ ಕಾರ್ತಿಕ್ ಅವರು ಶಹಬಾಝ್ ಅಹ್ಮದ್ (ಔಟಾಗದೆ 32, 21 ಎಸೆತ, 3 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಆರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 97 ರನ್ ಸೇರಿಸಿ ತಂಡದ ಮೊತ್ತವನ್ನು 189ಕ್ಕೆ ತಲುಪಿಸಿದರು.
ಡೆಲ್ಲಿ ಪರ ಶಾರ್ದೂಲ್ ಠಾಕೂರ್(1-27), ಖಲೀಲ್ ಅಹ್ಮದ್(1-36), ಕುಲದೀಪ್ ಯಾದವ್(1-46) ಹಾಗೂ ಅಕ್ಷರ್ ಪಟೇಲ್ (1-29) ತಲಾ ಒಂದು ವಿಕೆಟ್ ಪಡೆದರು.







