ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಯಿಂದ ಮಾಶಾಸನ ಮಂಜೂರು
ಬೆಂಗಳೂರು: ಜಿಲ್ಲಾಡಳಿತವನ್ನು ಜನರೆಡೆಗೆ ಕರೆದೊಯ್ಯುವ ಪ್ರಯತ್ನವಾಗಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದಲ್ಲಿಂದು ಹೆಸರಘಟ್ಟ ಗ್ರಾಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ಸಲ್ಲಿಸಲಾದ ವಿಧವಾ ವೇತನದ ಒಂದು ಮತ್ತು ವಿಕಲಚೇತನರ ಮಾಸಾಶನದ ಎರಡು ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.
ಶನಿವಾರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಹೆಸರಘಟ್ಟ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಹೆಸರಘಟ್ಟದ ಸರ್ವೇ ನಂ.325ರಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಅನುಮತಿ ಕೋರಿ ನೀಡಲಾದ ಅರ್ಜಿಯನ್ನು ಸ್ವೀಕರಿಸಿ ಸ್ಥಳದಲ್ಲೇ ಮಂಜೂರಾತಿ ನೀಡಿದರು. ಆಟದ ಮೈದಾನದ ನಿರ್ಮಾಣದಿಂದಾಗಿ ಗ್ರಾಮದ ಯುವ ಪೀಳಿಗೆಗೆ ಉಪಯೋಗವಾಗುವುದು ಮಾತ್ರವಲ್ಲದೆ, ಸರಕಾರಿ ಜಮೀನಿನ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಬೆಳೆದಂತೆ ಹೆಸರಘಟ್ಟ ಪ್ರದೇಶವು ಸಹ ಬೆಳೆಯುತ್ತಿದೆ. ಸಾಮಾನ್ಯವಾಗಿ ಹೆಸರುಘಟ್ಟ ಹಸಿರುಭರಿತ ಪ್ರದೇಶವೆಂದೆ ಜನ ಜನಿತವಾಗಿದೆಯಾದರೂ, 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮವು ಗ್ರಾಮದ ಲಕ್ಷಣಗಳನ್ನು ಕ್ರಮೇಣ ಕಳೆದುಕೊಂಡು ಪಟ್ಟಣದ ಸ್ವರೂದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಅವರು ತಿಳಿಸಿದರು.
ನಗರೀಕರಣದೊಂದಿಗೆ ಗಿಡ ಮರಗಳನ್ನೂ ಬೆಳೆಸಿ ಹಸಿರು ಹೆಚ್ಚಿಸುವ ಪರಿಪಾಠವನ್ನು ಇಲ್ಲಿನ ಜನರು ರೂಢಿಸಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ 837 ಕೆರೆಗಳಿದ್ದು ಸಾರ್ವಜನಿಕರ ಪ್ರದೇಶವನ್ನು ಹಾಗೂ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದರೂ ಹೆಸರಘಟ್ಟ ಕೆರೆ ಭರ್ತಿಯಾಗಿಲ್ಲ ಎಂದು ಹೇಳಿದರು.
ರಾಜಕಾಲುವೆ ಮಾರ್ಗಗಳಲ್ಲಿ ಹೂಳು ತುಂಬಿಕೊಂಡಿರುವುದು, ಒತ್ತುವರಿಯಾಗಿರುವುದು ಸೇರಿದಂತೆ ವಿವಿಧ ಕಾರಣಗಳು ಇರಬಹುದು. ಆದಷ್ಟು ಬೇಗ ಈ ಕೆರೆಯ ಪ್ರದೇಶದ ಹಾಗೂ ರಾಜಕಾಲುವೆಗಳ ಸರ್ವೇ ಕಾರ್ಯ ಕೈಗೊಂಡು ಒತ್ತುವರಿ ತೆರವು ಕಾರ್ಯಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ವೇಗಗತಿಯಲ್ಲಿ ಬೆಳೆಯುತ್ತಿರುವ ಈ ಪ್ರದೇಶದಲ್ಲಿ ಭವಿಷ್ಯದಲ್ಲಿ ಹೆಚ್ಚಾಗುವ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸಲು ಅಂಗನವಾಡಿ, ಶಾಲೆ, ಆಟದ ಮೈದಾನ, ಕಾಲೇಜು, ಸ್ಮಶಾನಭೂಮಿ ಅಂತಹ ಮೂಲಭೂತ ಸೌಲಭ್ಯಗಳಿಗೆ ಸರಕಾರಿ ಜಮೀನುಗಳನ್ನು ಒದಗಿಸುವುದು ಕಷ್ಟವಾಗಲಿದೆ. ಹೀಗಾಗಿ, ಈಗಲೇ ಈ ಕುರಿತು ದೂರದೃಷ್ಟಿಯಿಂದ ಜಮೀನನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆಯ ವತಿಯಿಂದ ಕಳೆ ಕೀಳುವ ಯಂತ್ರ, ಮೇವು ಕಟಾವು ಮಾಡುವ ಯಂತ್ರ, ಗುಂಡಿ ಹೊಡಿಯುವ ಯಂತ್ರವನಗನು ರೈತರಿಗೆ ಸಹಾಯಕ ಕೃಷಿ ನಿರ್ದೇಶಕರಾದ ವಿನೋದಮ್ಮ, ಕೃಷಿ ಅಧಿಕಾರಿ ಕಿರಣ್ ವಿ.ವಿ.ರವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಕಾರಿ ವಿತರಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳಡಿ 10 ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ಅವರು ವಿತರಿಸಿದರು.
ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿಗಳನ್ನು ವಿತರಣೆ ಮಾಡಲಾಯಿತು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹಸುಗಳಿಗೆ ಲವಣ ಮಿಶ್ರಣ ಔಷಧಿ ಮತ್ತು ಜಂತು ನಾಶಕ ಔಷಧಿಯನ್ನು ಉಚಿತವಾಗಿ ಮುಖ್ಯ ಪಶುವೈದ್ಯಧಿಕಾರಿ ಡಾ.ವಾಸುದೇವ್ ವಿತರಿಸಿದರು.
ವೇದಿಕೆಯಲ್ಲಿ ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ, ಗ್ರಾ.ಪಂ.ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷೆ ಪರಿಮಳ, ಪಿಡಿಓ ಶಿವಭದ್ರಯ್ಯ, ಕಾರ್ಯದರ್ಶಿ ಚನ್ನಪ್ಪ, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.







