ಕೊನೆಗೂ ಪಚ್ಚನಾಡಿ ಘನ ತ್ಯಾಜ್ಯ ತೆರವು
ಬೆಂಗಳೂರು, ಎ.16: ಹಲವು ವರ್ಷಗಳಿಂದ ಸಂಗ್ರಹವಾಗಿರುವ ಘನ ತ್ಯಾಜ್ಯವನ್ನು ಪಚ್ಚನಾಡಿ ಭೂಭರ್ತಿ ಘಟಕದಿಂದ ತೆರವುಗೊಳಿಸುವ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‍ಗೆ ಉತ್ತರಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆಲೋಕ್ ಆರಾಧೆ ಹಾಗೂ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಪಾಲಿಕೆ ಈ ಮಾಹಿತಿ ಹಂಚಿಕೊಂಡಿದೆ.
ಪಾಲಿಕೆ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆನಂತರ, ಪ್ರಮಾಣಪತ್ರ ದಾಖಲಿಸಿಕೊಂಡಿರುವ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಮಾ.8ರಂದು ನೀಡಿದ ಒಪ್ಪಿಗೆ ಪತ್ರ ಆಧರಿಸಿ ಗುತ್ತಿಗೆದಾರರು ಮಾ.11ರಂದು ಬ್ಯಾಂಕ್ ಖಾತರಿ ಒದಗಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಪ್ರಾಥಮಿಕ ಹಂತದ ಕೆಲಸ ಆರಂಭಿಸಿದ್ದಾರೆ. ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯದ ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರಕ್ಕೆ ಮೂಲಸೌಕರ್ಯಗಳನ್ನು ಸೃಷ್ಟಿಸಿಕೊಳ್ಳುವುದನ್ನು ಪ್ರಾಥಮಿಕ ಹಂತದ ಕಾಮಗಾರಿ ಒಳಗೊಂಡಿದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.





