ಕರಗ ಶಕ್ತ್ಯೋತ್ಸವಕ್ಕೆ ಅದ್ದೂರಿ ಚಾಲನೆ
ಬೆಂಗಳೂರು, ಎ.16: ಕಳೆದೆರಡು ವರ್ಷದಿಂದ ಕೊರೋನಾ ಮಹಾಮಾರಿಯಿಂದ ಬೆಂಗಳೂರು ಕರಗ ವಿಜೃಂಭನೆಯಿಂದ ನಡೆದಿರಲಿಲ್ಲ. ಈ ವರ್ಷ ಅದ್ದೂರಿಯಾಗಿ ಕರಗ ಉತ್ಸವ ನಡೆಯಲಿದ್ದು, ಕರಗ ಶಕ್ತ್ಯೊತ್ಸವಕ್ಕೆ ರವಿವಾರ ಬೆಳಗಿನ ಜಾವ 12.30ಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಕರಗ ಪೂಜಾ ವಿಧಿ ವಿಧಾನಗಳು ಏ.8 ರಿಂದ ಧರ್ಮರಾಯ ದೇವಸ್ಥಾನದಲ್ಲಿ ನೆರೆವೇರಿಸಲಾಗುತ್ತಿತ್ತು.
ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನು ಸ್ವಚ್ಛಗೊಳಿಸಿದ್ದು, ಕಬ್ಬನ್ ಪೇಟೆಯ ಬೀದಿಗಳಲ್ಲಿ ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನದವರೆಗೆ ಕರಗ ಮೆರವಣಿಗೆ ನಡೆಯಲಿದೆ.
ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾಗಿರುವ ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಹೂವಿನ ಕಗರವು ಪ್ರವೇಶಿಸುವುದರಿಂದ ದರ್ಗಾವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ನಗರದ ಬಾಗಿಲುಗಳು ಸೇರಿದಂತೆ ದೇವಸ್ಥಾನ, ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ನಗರದಲ್ಲಿ 18 ಪಲ್ಲಕ್ಕಿಗಳು ಸಂಚರಿಸಲಿವೆ.
ಬಿಬಿಎಂಪಿ ವತಿಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಲಕ್ಷಾಂತರ ಜನರು ಕರಗದಲ್ಲಿ ಭಾಗವಹಿಸಿದ್ದರಿಂದ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.
ಪ್ರತಿವರ್ಷ ಮಳೆ, ಗಾಳಿ ಇದ್ದರೂ ಬೆಂಗಳೂರು ಕರಗವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣಕ್ಕಾಗಿ ವಿಜೃಂಭಣೆಯಿಂದ ಆಚರಣೆ ಮಾಡಲು ಸಾಧ್ಯವಾಗಲಿಲ್ಲ, ಆದರೂ ಕರಗ ಮಹೋತ್ಸವ ನಿಲ್ಲಲಿಲ್ಲ. ಈ ವರ್ಷ ಕೊರೋನ ಸೋಂಕು ಇಲ್ಲದ ಕಾರಣ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಯಾವುದೇ ಭೇದ-ಭಾವವಿಲ್ಲದೆ, ಕರಗ ಮರೆವಣಿಗೆಯನ್ನು ನಗರದ ಜನರು ನೋಡಿ ಕಣ್ತುಂಬಿಕೊಳ್ಳುತ್ತಾರೆ.
-ಲಕ್ಷ್ಮಣ್, ಬೆಂಗಳೂರು ಕರಗ ಆಯೋಜಕರು







