ಹಣ ಹಂಚದೆ ಚುನಾವಣೆ ಗೆದ್ದ ನಿಜನಾಯಕ ಶ್ರೀರಾಮರೆಡ್ಡಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಯ ಜನಹೋರಾಟಗಳಲ್ಲಿ ಶ್ರೀರಾಮರೆಡ್ಡಿಯವರ ಪಾತ್ರವನ್ನು ಮರೆಯುವಂತೆಯೇ ಇಲ್ಲ. ಮೊದಲೇ ನೀರಿಲ್ಲದ ಬೆಂಗಾಡು. ಬೆಟ್ಟ ಗುಡ್ಡಗಳ ನಾಡು. ಇಲ್ಲಿನ ಜನರ ಬದುಕು ಹೇಳತೀರದು. ಸಮಸ್ಯೆಗಳು ನೂರಾರು. ಭೂರಹಿತರ ಹೋರಾಟದಿಂದ ಹಿಡಿದು ಕಾರ್ಮಿಕ ಹೋರಾಟಗಳವರೆಗೆ ಶ್ರೀರಾಮರೆಡ್ಡಿಯವರು ಮುಂಚೂಣಿಯಲ್ಲಿರುತ್ತಿದ್ದರು.
ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗವಾಗಬೇಕಿದ್ದ, ತಮ್ಮೆಲ್ಲ ನೋವು-ನಲಿವುಗಳಿಗೆ ಜೀವಸೆಲೆಯಾಗಬೇಕಾಗಿದ್ದ ರಾಜಕಾರಣ ಇವತ್ತು ಕೆಲವರ ಸೊತ್ತಾಗಿದೆ. ಅದರಲ್ಲೂ ಚುನಾವಣಾ ರಾಜಕಾರಣ ಸಾವಿರಾರು ಕೋಟಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಪರಿವರ್ತನೆಯಾಗಿದೆ. ಚುನಾವಣೆಗೆ ಸ್ಪರ್ಧಿಸುವ ರಾಜಕಾರಣಿಗೆ ಜಾತಿ, ಹಣ, ಜನಪ್ರಿಯತೆಯಷ್ಟೇ ಅಲ್ಲ, ಅದಕ್ಕೂ ಮೀರಿದ ಬುದ್ಧಿ ಸಿದ್ಧಿಸಿರಬೇಕಾಗುತ್ತದೆ. ಹಾಗಾಗಿ ಇವತ್ತು ರಾಜಕಾರಣ ಉಳ್ಳವರ, ಬಲಾಢ್ಯರ ಪಡಸಾಲೆಯಲ್ಲಿ ಪವಡಿಸಿದೆ. ವೃತ್ತಿವಂತ ರಾಜಕಾರಣಿಗಳ ಬದುಕು ರಾಜ-ಮಹಾರಾಜರನ್ನು ನೆನಪಿಸುತ್ತಿದೆ. ಇದಕ್ಕೆ ಅಪವಾದವೆಂಬಂತೆ, ಹಣ, ಹೆಂಡ ಹಂಚದೆ ರಾಜ್ಯ ವಿಧಾನಸಭೆಗೆ ಒಂದಲ್ಲ, ಎರಡು ಸಲ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದವರು ಸಿಪಿಐ(ಎಂ)ನ ಜಿ.ವಿ.ಶ್ರೀರಾಮರೆಡ್ಡಿಯವರು. ಇವರ ಗೆಲುವು ಪ್ರಜಾಪ್ರಭುತ್ವದ ಗೆಲುವು. ಜನರ ಗೆಲುವು. ಜನರ ನಡುವಿನಿಂದ ಹುಟ್ಟಿ ಬಂದ ಹೋರಾಟಗಾರನ ಗೆಲುವು. ಅಂತಹ ಜನನಾಯಕ ಶ್ರೀರಾಮರೆಡ್ಡಿ(73) ಇಂದು ನಮ್ಮಿಂದಿಗಿಲ್ಲ. ಅವರು ಕಟ್ಟಿದ ಸಂಘಟನೆ, ಹೋರಾಟ, ಚಳವಳಿಗಳಿವೆ. ಕರ್ನಾಟಕದಲ್ಲಿ ಕೆಂಬಾವುಟ ಹಿಡಿದು ದಮನಿತರ, ಶೋಷಿತರ ಮತ್ತು ಕಾರ್ಮಿಕರ ಪರವಾಗಿ ಹೋರಾಡಿದ ವ್ಯಕ್ತಿ ಶ್ರೀರಾಮರೆಡ್ಡಿ. ಸಿಪಿಐಎಂ ಪಕ್ಷದಲ್ಲಿ ಸಕ್ರಿಯರಾಗಿದ್ದ ರೆಡ್ಡಿಯವರು,
ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು. ರೈತ, ದಲಿತ, ಕಾರ್ಮಿಕ ಸಂಘಟನೆಗಳಿಗೆ ಶಕ್ತಿತುಂಬಿದವರು. ಬೀದಿ ಹೋರಾಟಗಳಿಂದ ಅಧಿಕಾರ ರಾಜಕಾರಣಕ್ಕೆ ಹೋಗುವುದು ಹೇಗೆ ಎಂಬುದಕ್ಕೆ ಮಾದರಿಯೊಂದನ್ನು ನಿರ್ಮಿಸಿ ಕೊಟ್ಟವರು. ಲೇಖಕ, ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಅವರು, ''ಶ್ರೀರಾಮ ರೆಡ್ಡಿ, ಮಾಧುಸ್ವಾಮಿ, ರಮೇಶ್ ಕುಮಾರ್, ಜಯಪ್ರಕಾಶ್ ಹೆಗಡೆ, ವಾಟಾಳ್ ಇವರೆಲ್ಲ ಒಟ್ಟಿಗೆ ವಿಧಾನಸಭೆಯಲ್ಲಿ ನಿಂತು, ಜನವಿರೋಧಿ ಸಂಗತಿಗಳನ್ನು ವಿರೋಧಿಸುತ್ತಿದ್ದ ರೀತಿಯೇ ರೋಮಾಂಚಕವಾಗಿರುತ್ತಿತ್ತು ಮತ್ತು ಬೋಧಪ್ರದವಾಗಿರುತ್ತಿತ್ತು. ನಮ್ಮ ಪಕ್ಕದ ಊರಿನವರು, ಸ್ವಲ್ಪ ಖಡಕ್, ಆದರೆ ಪ್ರೀತಿಯ ಮನುಷ್ಯ'' ಎಂದು ನೆನಪು ಮಾಡಿಕೊಳ್ಳುತ್ತಾರೆ. ಹೌದು, ಸರಕಾರದ ಲೋಪದೋಷಗಳನ್ನು ಎತ್ತಿ ಹಿಡಿದು, ಅಧಿಕಾರಸ್ಥರನ್ನು ಅಲ್ಲಾಡಿಸುವ ತಾಕತ್ತು ಶ್ರೀರಾಮರೆಡ್ಡಿಯವರಲ್ಲಿತ್ತು. ಅದಕ್ಕೆ ಅವರ ಪ್ರಾಮಾಣಿಕತೆ ಮತ್ತು ವಿದ್ವತ್ತು ಶಕ್ತಿ ತುಂಬಿತ್ತು. ವಿಧಾನ ಸಭೆಯಲ್ಲಿ ಅವರ ಮಾತುಗಳು, ಮಂಡಿಸುತ್ತಿದ್ದ ವಾದಗಳು, ಬಿಡಿಸಿಡುತ್ತಿದ್ದ ಅಂಕಿ ಅಂಶಗಳು ಅಧಿಕಾರಸ್ಥರ ತೊಡೆ ನಡುಗಿಸುತ್ತಿದ್ದವು. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ ಉಡುಪಿಯಲ್ಲಿ ನಡೆದ ಅಮಾನವೀಯ ಘಟನೆ. ಹಾಜಬ್ಬ,
ಹಸನಬ್ಬ ಎಂಬ ದನದ ವ್ಯಾಪಾರಿಗಳನ್ನು ಹಿಂದೂ ಸಂಘಟನೆಗಳು ಬೆತ್ತಲೆ ಮಾಡಿ ರಸ್ತೆಯಲ್ಲಿ ಕೂರಿಸಿದಾಗ, ಮಾನವಂತರು ನೋಡಿಯೂ ಸುಮ್ಮನಿದ್ದಾಗ, ಮಾಧ್ಯಮಗಳು ಮೈಮರೆತಾಗ, ಅದನ್ನು ಸದನದಲ್ಲಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದವರು ಜಿ.ವಿ. ಶ್ರೀರಾಮರೆಡ್ಡಿಯವರು. ಆ ಬಳಿಕ ಆ ಪ್ರಕರಣ ಮಾನವಂತ ಮಾಧ್ಯಮಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಸಂಚಲನ ಉಂಟು ಮಾಡಿತು. ಆರೋಪಿಗಳ ಬಂಧನವಾಯಿತು. ಹಾಗೆಯೇ ದೇಶಭಕ್ತರಿಗೆ ಎಚ್ಚರಿಕೆ ನೀಡಿತು. ಅಸಹಾಯಕರಿಗೆ ಧೈರ್ಯ ಸ್ಥೈರ್ಯವನ್ನೂ ತುಂಬಿತು. ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಯ ಜನಹೋರಾಟಗಳಲ್ಲಿ ಶ್ರೀರಾಮರೆಡ್ಡಿಯವರ ಪಾತ್ರವನ್ನು ಮರೆಯುವಂತೆಯೇ ಇಲ್ಲ. ಮೊದಲೇ ನೀರಿಲ್ಲದ ಬೆಂಗಾಡು. ಬೆಟ್ಟ ಗುಡ್ಡಗಳ ನಾಡು. ಇಲ್ಲಿನ ಜನರ ಬದುಕು ಹೇಳತೀರದು. ಸಮಸ್ಯೆಗಳು ನೂರಾರು. ಭೂರಹಿತರ ಹೋರಾಟದಿಂದ ಹಿಡಿದು ಕಾರ್ಮಿಕ ಹೋರಾಟಗಳವರೆಗೆ ಶ್ರೀರಾಮರೆಡ್ಡಿಯವರು ಮುಂಚೂಣಿಯಲ್ಲಿರುತ್ತಿದ್ದರು. ''ನಮ್ಮ ನೀರಿಲ್ಲದ ನಾಡಿನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ಶ್ರೀರಾಮರೆಡ್ಡಿಯವರು, ಅವರು ಎರಡು ಬಾರಿ ಶಾಸಕರಾಗಿ ವಿಧಾನಸಭೆಯಲ್ಲಿ ದನಿ ಎತ್ತಿದ್ದು, ಸಮಸ್ಯೆಗಳನ್ನು ಬಿಡಿಸಿಟ್ಟು ಅಧಿಕಾರಸ್ಥರ ಕಣ್ತೆರೆಸಿದ್ದು ಮರೆಯುವಂತಿಲ್ಲ. ಅದರ ಪರಿಣಾಮವಾಗಿ, ಇಂದು ನಾವು ನೀರು ಕಾಣುತ್ತಿದ್ದೇವೆ. ಅವರೊಬ್ಬ ಅಪರೂಪದ ಜನಪ್ರತಿನಿಧಿ, ಧೀಮಂತ ವ್ಯಕ್ತಿ'' ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ನೆನಪು ಮಾಡಿಕೊಳ್ಳುತ್ತಾರೆ. ಇದಿಷ್ಟೇ ಅಲ್ಲದೆ, ಸಾಮಾಜಿಕ ಪಿಡುಗುಗಳ ವಿರುದ್ಧ, ಮೂಢನಂಬಿಕೆಯ ವಿರುದ್ಧ, ಜಾತಿ ಅಸಮಾನತೆಯ ವಿರುದ್ಧ ಕರ್ನಾಟಕದಾದ್ಯಂತ ಹೋರಾಟಗಳಲ್ಲಿ ರೆಡ್ಡಿ ಭಾಗಿಯಾಗಿದ್ದಾರೆ. ಜನರನ್ನು ಜಾಗೃತರನ್ನಾಗಿಸಿದ್ದಾರೆ. ಉಡುಪಿ ಮಠದ ಪಂಕ್ತಿಭೇದ, ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ಚಳವಳಿ ಹಮ್ಮಿಕೊಂಡು ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಜನನಾಯಕನನ್ನು ಪಕ್ಷಗಳು ಇನ್ನಷ್ಟು ಎತ್ತರಕ್ಕೆ ಬೆಳೆಸುವ, ಬೆಂಬಲಿಸುವ ಸ್ಥಿತಿ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಬೇಕಿದೆ. ಆ ಮೂಲಕ ಅವರಿಂದ ಆಗುವ ಸಾಮಾಜಿಕ ಕಾರ್ಯಗಳಿಗೆ ನೀರೆರೆಯಬೇಕಾಗಿದೆ. ವಿಪರ್ಯಾಸವೆಂದರೆ, 2020ರ ಜೂನ್‌ನಲ್ಲಿ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಪಿಐಎಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಇದು, ಸಿಕ್ಕಾಪಟ್ಟೆ ಶಿಸ್ತಿನ ಕಮ್ಯುನಿಸ್ಟ್ ಪಕ್ಷದ ಅತಿರೇಕದ ವರ್ತನೆಯಂತೆ ಕಂಡರೂ ಆಶ್ಚರ್ಯವಿಲ್ಲ. ಆದರೆ ಹುಟ್ಟು ಹೋರಾಟಗಾರರಾದ ಶ್ರೀರಾಮರೆಡ್ಡಿಯವರು ಸುಮ್ಮನಾಗದೆ, ಪಕ್ಷದಿಂದ ಉಚ್ಚಾಟಿತರಾದ ನಂತರ ಪ್ರಜಾ ಸಂಘರ್ಷ ಸಮಿತಿ ಪಕ್ಷವನ್ನ ಸ್ಥಾಪಿಸಿದ್ದರು. ಇತ್ತೀಚೆಗೆ ಬೃಹತ್ ಸಮಾವೇಶವನ್ನು ಆಯೋಜಿಸಿ ರೈತರು, ಕಾರ್ಮಿಕರ ಬಗ್ಗೆ ಸುಧೀರ್ಘವಾಗಿ ಮಾತನಾಡಿ, ಅವರ ಕಾಳಜಿ ಕಳಕಳಿಯನ್ನು ವ್ಯಕ್ತಪಡಿಸಿದ್ದರು.
ಕಮ್ಯುನಿಸ್ಟ್ ನಾಯಕ ಎ.ವಿ.ಅಪ್ಪಾಸ್ವಾಮಿ ಅವರ ಶಿಷ್ಯನಾಗಿ ಹೋರಾಟದ ಬದುಕಿಗೆ ದೀಕ್ಷೆ ಪಡೆದ ಶ್ರೀರಾಮರೆಡ್ಡಿಯವರು, ರಾಜಕಾರಣಕ್ಕೆ ಧುಮುಕಿ ಐದು ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, 1999 ಮತ್ತು 2004ರಲ್ಲಿ, ಎರಡು ಬಾರಿ ಗೆದ್ದು ಶಾಸಕರಾಗಿದ್ದರು. ಇದ್ದಷ್ಟು ದಿನವೂ ಜನರ ಪರ ದನಿಯಾಗಿದ್ದರು. ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿದ್ದರು. ಮದುವೆಯಾಗದೆ ಒಬ್ಬಂಟಿಯಾಗಿದ್ದು, ತಮ್ಮ ಬದುಕನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಎ.15ರಂದು ಬಾಗೇಪಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದಾಗ, ಅಪಾರ ಪ್ರಮಾಣದ ಬೆಂಬಲಿಗರೇ ಅವರ ಬಂಧುಗಳಾಗಿ ಕಂಬನಿಗರೆದಿದ್ದರು. ಇವತ್ತಿನ ರಾಜಕಾರಣದಲ್ಲಿ ಇಂತಹ ವ್ಯಕ್ತಿ ಸಲ್ಲುವುದು ಸಾಧ್ಯವೇ ಇಲ್ಲವೆಂದರೂ, ಅದನ್ನವರು ಸಾಧ್ಯವಾಗಿಸಿದ ಶ್ರೀರಾಮರೆಡ್ಡಿ ಧೀಮಂತ ವ್ಯಕ್ತಿಯಾಗಿ ಚರಿತ್ರೆಯಲ್ಲಿ ದಾಖಲಾಗುತ್ತಾರೆ. ಆ ಮೂಲಕ ನಮ್ಮಾಡನಿರುತ್ತಾರೆ.







