ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ ಪ್ರಕರಣ: 12 ಪೊಲೀಸರಿಗೆ ಗಾಯ, 40 ಮಂದಿ ಬಂಧನ

ಹುಬ್ಬಳ್ಳಿ: ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಬಳಿಕ ಕರ್ನಾಟಕದ ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ಶನಿವಾರ ರಾತ್ರಿ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಇನ್ಸ್ಪೆಕ್ಟರ್ ಸೇರಿದಂತೆ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಸುಮಾರು 40 ಜನರನ್ನು ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.
ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಹಾಗೂ ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್ ಗಳನ್ನು ಬಳಸಿದರು. ಹಿಂಸಾಚಾರದ ನಂತರ ನಗರದಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಕೆಲವು ಪೊಲೀಸ್ ವಾಹನಗಳನ್ನು ಗುಂಪು ಧ್ವಂಸಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ್ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾನೆ. ಇತರರು ಅದನ್ನು ಆಕ್ಷೇಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ವ್ಯಕ್ತಿಯ ವಿರುದ್ಧ ತೆಗೆದುಕೊಂಡ ಕ್ರಮದಿಂದ ತೃಪ್ತರಾಗದ ನೂರಾರು ಜನರು ಮಧ್ಯರಾತ್ರಿಯ ಸುಮಾರಿಗೆ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಲಾಭುರಾಮ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, "ಪೊಲೀಸ್ ಅಧಿಕಾರಿಯೊಬ್ಬರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯಲ್ಲಿ ಭಾಗಿಯಾಗಿರುವ ಕೆಲವರನ್ನು ಬಂಧಿಸಲಾಗಿದೆ. ಇದು ಪೂರ್ವ ಯೋಜಿತ ದಾಳಿ" ಎಂದು ಹೇಳಿದರು.







