ವಿಘ್ನಗಳ ನಡುವೆ ಅದ್ದೂರಿಯಾಗಿ ನಡೆದ ಐತಿಹಾಸಿಕ ಬೆಂಗಳೂರು ಕರಗ

ಬೆಂಗಳೂರು, ಎ.17: ಕೊರೋನ ವೈರಸ್ ಭೀತಿಯಿಂದ ಕಳೆಗುಂದಿದ್ದ ಬೆಂಗಳೂರು ಕರಗ ಈ ವರ್ಷ ಮಳೆಯ ನಡುವೆಯೂ ಅದ್ದೂರಿಯಾಗಿ ನಡೆಯಿತು. ಈ ವರ್ಷ ಕೊರೋನಾ ಸೋಂಕಿನ ಸಮಸ್ಯೆ ಇಲ್ಲದಿದ್ದರೂ, ಕೋಮುದ್ವೇಷ ಕದಡುವ ಕೆಲಸ ನಡೆದಿತ್ತು. ಕರಗ ಮಸ್ತಾನ್ ದಾರ್ಗಗೆ ಹೋಗುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ಬಿಬಿಎಂಪಿ, ಪೊಲೀಸ್ ಇಲಾಖೆ ಸೇರಿದಂತೆ ಜನಪ್ರತಿನಿದಿಗಳ ಮಧ್ಯಸ್ಥಿಕೆಯಿಂದ ಎಲ್ಲಯೂ ಗಲಭೆಗೆ ಅವಕಾಶ ಸಿಗಲಿಲ್ಲ.
ರವಿವಾರ ಮುಂಜಾನೆ 12:30ಕ್ಕೆ ಧರ್ಮರಾಯ ದೇವಸ್ಥಾನದಿಂದ ಹೂವಿನ ಕರಗದ ಮೆರವಣಿಗೆ ಹೊರಟಿತು. ಮಹಾರಥದಲ್ಲಿ ಉತ್ಸವ ಮೂರ್ತಿಗಳು ಸಾಗಿದವು. ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ಕರಗ ಹೊತ್ತು ಸಾಗಿದರು.
ಚಿಕ್ಕಪೇಟೆಯ ಅಕ್ಕಿಪೇಟೆ ಮುಖ್ಯರಸ್ತೆಯ ಹಝ್ರತ್ ತವಕ್ಕಲ್ ಶಾ ಮಸ್ತಾನ್ ಸೋಹರ್ವಾರ್ಡಿ ರಹಮತುಲ್ಲಾ ದರ್ಗಾಕ್ಕೆ ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕರಗ ಪ್ರವೇಶಿಸಿತು. ದರ್ಗಾದಲ್ಲಿ ಮುಸ್ಲಿಂ ಸಮುದಾಯದವರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಭಕ್ತಾದಿಗಳಿಗೆ ಸಿಹಿ ತಿಂಡಿ, ನೀರು, ಹಣ್ಣುಗಳನ್ನು ನೀಡಿ ಸ್ವಾಗತಿಸಿದರು.
ಕಬ್ಬನ್ ಪೇಟೆಯ ಬೀದಿಗಳಲ್ಲಿ ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನದವರೆಗೆ ಕರಗ ಮೆರವಣಿಗೆ ನಡೆಯಿತು.






.jpg)

