ಐಪಿಎಲ್: ಮಿಲ್ಲರ್ ಅಬ್ಬರದ ಬ್ಯಾಟಿಂಗ್, ಚೆನ್ನೈ ವಿರುದ್ಧ ಗುಜರಾತ್‌ಗೆ ಜಯ

ಪುಣೆ, ಎ.17: ಡೇವಿಡ್ ಮಿಲ್ಲರ್ ಭರ್ಜರಿ ಅರ್ಧಶತಕದ(ಔಟಾಗದೆ 94 ರನ್, 51 ಎಸೆತ, 8 ಬೌಂಡರಿ, 6 ಸಿಕ್ಸರ್) ನೆರವಿನಿಂದ ಐಪಿಎಲ್‌ನ 29ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್‌ಗಳ ಅಂತರದಿಂದ ಮಣಿಸಿತು.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 170 ರನ್ ಗುರಿ ಪಡೆದ ಗುಜರಾತ್ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.
ಜೋರ್ಡನ್ ಎಸೆದ 18ನೇ ಓವರ್‌ನಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 23 ರನ್ ಗಳಿಸಿದ ಹಂಗಾಮಿ ನಾಯಕ ರಶೀದ್ ಖಾನ್ (40 ರನ್,21 ಎಸೆತ, 2 ಬೌಂಡರಿ, 3 ಸಿಕ್ಸರ್)ಪಂದ್ಯವು ಗುಜರಾತ್‌ನತ್ತ ವಾಲಲು ಪ್ರಮುಖ ಪಾತ್ರವಹಿಸಿದರು.
6ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿರುವ ಗುಜರಾತ್ ಒಟ್ಟು 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಕಾಯ್ದುಕೊಂಡಿದೆ.
ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(73 ರನ್, 48 ಎಸೆತ, 5 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ರಾಬಿನ್ ಉತ್ತಪ್ಪ(3 ರನ್) ಹಾಗೂ ಮೊಯಿನ್ ಅಲಿ(1ರನ್)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡ ಚೆನ್ನೈ ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಋತುರಾಜ್ (73 ರನ್)ಹಾಗೂ ಅಂಬಟಿ ರಾಯುಡು(46 ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್)3ನೇ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ನಾಯಕ ರವೀಂದ್ರ ಜಡೇಜ (ಔಟಾಗದೆ 22, 12 ಎಸೆತ, 2 ಸಿಕ್ಸರ್)ಹಾಗೂ ಶಿವಂ ದುಬೆ(19 ರನ್,17 ಎಸೆತ, 2 ಬೌಂಡರಿ)5ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 169ಕ್ಕೆ ತಲುಪಿಸಿದರು. ಗುಜರಾತ್ ಪರ ಅಲ್ಝಾರಿ ಜೋಸೆಫ್(2-34) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಶಮಿ(1-20) ಹಾಗೂ ಯಶ್ ದಯಾಳ್(1-40)ತಲಾ ಒಂದು ವಿಕೆಟ್ ಪಡೆದರು.
ಗಾಯದ ಸಮಸ್ಯೆಯ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಈ ಪಂದ್ಯವನ್ನು ಆಡಲಿಲ್ಲ. ರಶೀದ್ ಖಾನ್ ನಾಯಕತ್ವವಹಿಸಿದರು.