‘ಅನಾಥರ ತಾಯಿ’ಎಂದೇ ಜನಪ್ರಿಯರಾಗಿದ್ದ ಪಾಕಿಸ್ತಾನದ ಬಿಲ್ಕಿಸ್ ಈದಿ ನಿಧನ

photo courtesy:twitter/@BhatAzhar435135
ಹೊಸದಿಲ್ಲಿ, ಎ.17: ಪಾಕಿಸ್ತಾನದ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ, ಅನಾಥರ ತಾಯಿ ಎಂದೇ ಹೆಸರಾಗಿದ್ದ ಬಿಲ್ಕಿಸ್ ಬಾನೊ ಈದಿ (74 ವರ್ಷ) ಶುಕ್ರವಾರ ಅನಾರೋಗ್ಯದಿಂದ ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನರ್ಸ್ ಆಗಿ, ಮಾನವಹಿತದ ಮತ್ತು ಲೋಕೋಪಕಾರಿ ಕಾರ್ಯಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಟ್ಟಿದ್ದ ಬಿಲ್ಕಿಸ್ ಈದಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ, ದೇಶಕ್ಕೆ ಸಲ್ಲಿಸಿರುವ ಸರಿಸಾಟಿಯಿಲ್ಲದ ಮತ್ತು ಅಪ್ರತಿಮ ಸೇವೆಗಾಗಿ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ನಿಷಾನ್-ಇ- ಪಾಕಿಸ್ತಾನ’ ಗೌರವ ನೀಡಲು ಶಿಫಾರಸು ಮಾಡಿದೆ.
ಸಮಾಜ ಸೇವೆಗಾಗಿ 1986ರಲ್ಲಿ ರಾಮನ್ ಮ್ಯಾಗ್ಸೆಸೆ ಪುರಸ್ಕಾರ, ಸಾಮಾಜಿಕ ನ್ಯಾಯದ ಕಾರ್ಯಕ್ಕಾಗಿ 2015ರಲ್ಲಿ ಮದರ್ ತೆರೆಸಾ ಸ್ಮಾರಕ ಅಂತರಾಷ್ಟ್ರೀಯ ಪುರಸ್ಕಾರ ಸಹಿತ ಹಲವು ಪ್ರಶಸ್ತಿ ಪಡೆದಿದ್ದರು. ತನ್ನ ಪತಿ ಅಬ್ದುಲ್ ಸತ್ತಾರ್ ಈದಿ ಸ್ಥಾಪಿಸಿದ್ದ ಈದಿ ಪ್ರತಿಷ್ಟಾನದ ಸಮಾಜಸೇವಾ ಕಾರ್ಯಗಳಿಗೆ ಹೆಗಲು ಕೊಟ್ಟಿದ್ದ ಬಿಲ್ಕಿಸ್, 2016ರಲ್ಲಿ ಪತಿ ಮೃತಪಟ್ಟ ಬಳಿಕ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ವಿಶ್ವದ ಅತೀ ದೊಡ್ಡ ಸ್ವಯಂಸೇವಕ ಆಂಬ್ಯುಲೆನ್ಸ್ ಸೇವೆ ಎಂದು ಗುರುತಿಸಿಕೊಂಡಿದ್ದ ಈದಿ ಪ್ರತಿಷ್ಟಾನ, ಮನೆಯಿಲ್ಲದ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಿಕೊಟ್ಟಿದೆ.
ಬಿಲ್ಕಿಸ್ ಆರಂಭಿಸಿದ ತೊಟ್ಟಿಲು ಯೋಜನೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಹೆತ್ತವರಿಗೆ ಬೇಡವಾದ ಮಗುವನ್ನು, ಅದರಲ್ಲೂ ವಿಶೇಷವಾಗಿ ಹೆಣ್ಣುಮಗುವನ್ನು ಎಲ್ಲೆಂದರಲ್ಲಿ ತ್ಯಜಿಸುವ ಬದಲು ತೊಟ್ಟಿಲಿನಲ್ಲಿ ಇಟ್ಟು ಹೋಗುವ ಉಪಕ್ರಮವಿದು. ಇದಕ್ಕಾಗಿ ಈದಿ ಪ್ರತಿಷ್ಟಾನ ದೇಶದಾದ್ಯಂತ ಅಲ್ಲಲ್ಲಿ ತೊಟ್ಟಿಲುಗಳನ್ನು ಇಡುವ ಮೂಲಕ ಅನಾಥ ಮಕ್ಕಳನ್ನು ಸಾಕಿ ಸಲಹುವ ಯೋಜನೆಯಿದು. ಇದರಿಂದಾಗಿ ಅನಾಥರ ತಾಯಿ ಎಂದೇ ಗುರುತಿಸಿಕೊಂಡರು ಬಿಲ್ಕಿಸ್ ಈದಿ.ದಶಕದ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿದಾಟಿದ್ದ ಗೀತಾ ಎಂಬ ಮಹಿಳೆ 2015ರಲ್ಲಿ ಭಾರತಕ್ಕೆ ಮರಳಿ ಬರಲು ಬಿಲ್ಕಿಸ್ ಪ್ರಮುಖ ಪಾತ್ರ ವಹಿಸಿದ್ದು ಇದಕ್ಕಾಗಿ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು ಹಾಗೂ ಈದಿ ಫೌಂಡೇಷನ್ ಗೆ ಭಾರತದ ಜನತೆಯ ಕೊಡುಗೆಯಾಗಿ 1 ಕೋಟಿ ರೂ. ದೇಣಿಗೆ ಘೋಷಿಸಿದ್ದರು. ಆದರೆ ತಮ್ಮ ಮಾನವೀಯ ಕಾರ್ಯಕ್ಕೆ ಯಾವುದೇ ಸಂಸ್ಥೆ ಅಥವಾ ಸರಕಾರದಿಂದ ದೇಣಿಗೆ ಪಡೆಯುವುದಿಲ್ಲ ಎಂದು ಅಬ್ದುಲ್ ಸತ್ತಾರ್ ಈದಿ ಅವರು ಸೌಜನ್ಯದಿಂದ ನಿರಾಕರಿಸಿದ್ದರು.
ಬಿಲ್ಕಿಸ್ ಈದಿ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ ತೀವ್ರ ಸಂತಾಪ ಸೂಚಿಸಿದ್ದಾರೆ. ʼಮಾನವೀಯ ಕೆಲಸಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಬಿಲ್ಕಿಸ್ ವಿಶ್ವದಾದ್ಯಂತದ ಜನರ ಹೃದಯವನ್ನು ಗೆದ್ದಿದ್ದಾರೆ. ಭಾರತದ ಜನರೂ ಅವರನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
My sincere condolences on the passing of Bilquis Edhi. Her life long dedication to humanitarian work touched the lives of people across the globe. People in India too remember her fondly. May her soul rest in peace.
— Narendra Modi (@narendramodi) April 16, 2022







