ಪ್ರಚೋದನಾಕಾರಿ ವಿಚಾರ ಮುನ್ನೆಲೆಗೆ ತಂದು ವೈಷಮ್ಯ ಬಿತ್ತುತ್ತಿದ್ದಾರೆ: ಆಪ್ ಮುಖಂಡ ಭಾಸ್ಕರ್ ರಾವ್ ಆರೋಪ

ಫೈಲ್ ಚಿತ್ರ
ಧಾರವಾಡ, ಎ.17: ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿರುತ್ತದೆ ಹಾಗೂ ಕೆಲವರು ಬೇಕಂತಲೇ ಪ್ರಚೋದನಾಕಾರಿ ವಿಚಾರಗಳನ್ನು ಮುನ್ನೆಲೆಗೆ ತಂದು ವೈಷಮ್ಯ ಬಿತ್ತುತ್ತಿದ್ದಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಆರೋಪಿಸಿದ್ದಾರೆ.
ಶನಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗಕ್ಕೆ ಕೈ ಹಾಕಿದರೆ ಇದೆಲ್ಲ ಆಗುತ್ತದೆ. ಪೊಲೀಸ್ ಅಧಿಕಾರಿಗಳನ್ನು ತಮಗೇ ಬೇಕಾದ ಹಾಗೆ ನೇಮಕ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಣವೂ ನಡೆಯುತ್ತದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಆದರೆ, ಲಕ್ಷಾಂತರ ರೂಪಾಯಿ ಕೊಟ್ಟು ಬಂದವರು ಹೇಗೆ ನಿಷ್ಠೆಯಿಂದಿರುತ್ತಾರೆ ಎಂದು ಪ್ರಶ್ನಿಸಿದರು.
ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಮುಚ್ಚಿ ಹಾಕಲು ಇಂತಹ ಕಲಹಗಳನ್ನು ಹುಟ್ಟು ಹಾಕುತ್ತಿದ್ದಾರೆ. ಬೇಕಂತಲೇ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಟ್ಟು ಸಣ್ಣ ವಿಷಯಗಳನ್ನು ಮುನ್ನೆಲೆಗೆ ತಂದು ವೈಷಮ್ಯ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.





