ತಮಿಳುಗಿಂತ ಕನ್ನಡವೇ ಪ್ರಾಚೀನ ಭಾಷೆಯಾಗಿದೆ: ವಿಜಯಲಕ್ಷ್ಮೀ ಬಾಳೆಕುಂದ್ರಿ
ಬೆಂಗಳೂರು, ಎ.17: ತಮಿಳು ಭಾಷೆಯೇ ಪ್ರಾಚೀನ ಎಂಬ ಭಾವನೆ ಇದೆ. ಆದರೆ, ಅದಕ್ಕಿಂತಲೂ ಕನ್ನಡವೇ ಪ್ರಾಚೀನ ಎಂಬುದಾಗಿ ಬಹುತೇಕ ಅಧ್ಯಯನಗಳು ಸಾರುತ್ತಿವೆ ಎಂದು ಸಾಹಿತಿ ಹಾಗೂ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅಭಿಪ್ರಾಯಪಟ್ಟರು.
ರವಿವಾರ ಗಾಂಧಿ ಭವನದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಪ್ರಥಮ ಮಹಿಳಾ ಸಮಾವೇಶ ‘ಸ್ತ್ರೀ-ಸಂಭ್ರಮ-2022’ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಕುರಿತು ಅಭಿಮಾನ ಇರಬೇಕು. ಮಹಿಳೆಯರು ತಮ್ಮ ಸಂಸ್ಕøತಿ, ಸಾಮಾಜಿಕ ಹಾಗೂ ಕೌಟುಂಬಿಕ ಚಟುವಟಿಕೆಗಳ ಮೂಲಕ ಕನ್ನಡತನವನ್ನು ಉಳಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನದ ಬದಲಾವಣೆಯ ಮಧ್ಯೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನ ಕಾಯ್ದುಕೊಳ್ಳಬೇಕು. ಏನೇ ಬದಲಾವಣೆಗಳಾದರೂ ಸ್ತ್ರೀ ಎಲ್ಲ ಶಕ್ತಿಯೇ ಮೂಲ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಟಿ.ಲಲಿತಾ ನಾಯಕ್, ವಿಶ್ವಸ್ಥ ಮಂಡಳಿಯ ಎಂ.ಜಿ.ದೇಶಪಾಂಡೆ, ವೇದಿಕೆ ರಾಜ್ಯಾಧ್ಯಕ್ಷ ರಜನಿ ಅಶೋಕ, ಡಾ.ಅಶೋಕ ಜೀರಗ್ಯಾಳ್, ಸೌಗಂಧಿಕ ಜೋಯಿಸ್ ಉಪಸ್ಥಿತರಿದ್ದರು.





