ಅಫ್ಗಾನ್ ಮೇಲೆ ಪಾಕ್ ವಾಯುದಾಳಿ: ಪಾಕ್ ರಾಯಭಾರಿಗೆ ತಾಲಿಬಾನ್ ಸಮನ್ಸ್

ಸಾಂದರ್ಭಿಕ ಚಿತ್ರ;PTI
ಕಾಬೂಲ್, ಎ.17: ಇತ್ತೀಚಿಗೆ ಪಾಕಿಸ್ತಾನವು ಅಫ್ಘಾನ್ ನ ಖೋಸ್ಟ್ ಮತ್ತು ಖುನಾರ್ ಪ್ರಾಂತದ ವಿವಿಧೆಡೆ ನಡೆಸಿದ ವಾಯುದಾಳಿಯ ಕುರಿತು ಪಾಕಿಸ್ತಾನ ಸರಕಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ ಎಂದು ತಾಲಿಬಾನ್ ಹೇಳಿದೆ.
ಅಫ್ಗಾನ್ ನಲ್ಲಿನ ಪಾಕ್ ರಾಯಭಾರಿಯನ್ನು ಕರೆಸಿಕೊಂಡ ವಿದೇಶ ವ್ಯವಹಾರ ಸಚಿವಾಲಯ ವಾಯುದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಸಂದರ್ಭ ಅಫ್ಗಾನ್ ನ ಹಂಗಾಮಿ ವಿದೇಶ ವ್ಯವಹಾರ ಸಚಿವ ಅಮೀರ್ ಖಾನ್ ಮುತ್ತಖಿ ಮತ್ತು ಹಂಗಾಮಿ ಸಹಾಯಕ ರಕ್ಷಣಾ ಸಚಿವ ಅಲ್ಹಾಜ್ ಮುಲ್ಲಾ ಶಿರಿನ್ ಅಖುಂದ್ ಉಪಸ್ಥಿತರಿದ್ದರು ಎಂದು ಅಫ್ಗಾನಿಸ್ತಾನದ ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಫ್ಘಾನ್ ನ ಖೋಸ್ಟ್ ಮತ್ತು ಖುನಾರ್ ಪ್ರಾಂತದ ವಿವಿಧೆಡೆ ಪಾಕಿಸ್ತಾನದ ಯುದ್ಧವಿಮಾನ ನಡೆಸಿದ ಬಾಂಬ್ ದಾಳಿಯಲ್ಲಿ 5 ಮಕ್ಕಳು ಹಾಗೂ ಓರ್ವ ಮಹಿಳೆ ಮೃತಪಟ್ಟಿರುವುದಾಗಿ ಸ್ಥಳೀಯ ಅಧಿಕಾರಿಗಳು ಶನಿವಾರ ಹೇಳಿದ್ದರು. ಖೋಸ್ಟ್ ಮತ್ತು ಖುನಾರ್ ಪ್ರಾಂತದ ಪೆಸಾ ಮಿಲಾ ಮತ್ತು ಮೀರ್ ಸಫರ್ ಪ್ರದೇಶದಲ್ಲಿ ಪಾಕ್ ಸೇನೆಯ ಬಾಂಬ್ ದಾಳಿಯಲ್ಲಿ ಕನಿಷ್ಟ 33 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯು ಹೇಳಿರುವುದಾಗಿ ವರದಿಯಾಗಿದೆ.





