ದನಗಳೊಂದಿಗೆ ಓಟ

ಅಸ್ಪೃಶ್ಯರಾದ ನಾವೆಲ್ಲರೂ ಮೇಲ್ಜಾತಿಯವರ ಸಮಾನರೆಂದೂ, ನಮಗೆ ಊರಿನ ಬಾವಿಗಳ ನೀರನ್ನು ಕುಡಿಯುವ ಹಕ್ಕಿದೆಯೆಂದೂ, ದೇವಸ್ಥಾನಗಳಲ್ಲಿ ಪ್ರವೇಶಿಸಿ ಪೂಜಿಸುವ ಹಕ್ಕಿದೆಯೆಂದೂ ಮಾನ್ಯ ಅಂಬೇಡ್ಕರ್ ಅವರು ಹೇಳುತ್ತಾರೆ. ನಾವೆಲ್ಲ ಈ ಮೇಲ್ಜಾತಿಯವರ ಮುಂದೆ ಕೈಯೊಡ್ಡಿ ಬೇಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಆದೇಶಿಸಿದ್ದಾರೆ. ನಾವು ಸತ್ತ ದನದ ಮಾಂಸವನ್ನು ತಿನ್ನಬಾರದೆಂದು ಹೇಳುತ್ತಾರೆ. ನಮ್ಮ ಮಕ್ಕಳೆಲ್ಲ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಅಂಬೇಡ್ಕರ್ ಅವರು ಒತ್ತಾಯಿಸಿದ್ದಾರೆ. ಇದನ್ನು ಸಾಧಿಸಲು ನಮ್ಮಾಳಗಿನ ಜಾತೀಯ ತಾರತಮ್ಯವನ್ನು ತ್ಯಜಿಸಿ ಒಗ್ಗಟ್ಟಾಗಿ ಹೋರಾಡಬೇಕೆಂದು ಅಂಬೇಡ್ಕರ್‌ಜೀಯವರ ಬಯಕೆ.’’
ನನ್ನ ಎಂಭತ್ತು ವರ್ಷಗಳ ಹಿಂದಿನ ಜೀವನಕ್ಕೆ ನಾನು ಮರಳಿದರೆ ನನಗೆ ಮೊದಲು ನೆನಪಾಗುವುದು ಕತ್ತಲಿನ, ಮಣ್ಣಿನ ಗುಡಿಸಲು. ನಮ್ಮ ಕೇರಿಯ ಈ ಮಣ್ಣಿನ ಗುಡಿಸಲು ಕತ್ತಲನ್ನು ಹೊದ್ದುಕೊಂಡಂತೆ ಇದ್ದದ್ದು ನೆನಪಾಗುತ್ತದೆ. ಅಲ್ಲಿ ಬುಡ್ಡಿದೀಪದ ಬೆಳಕು ಹುಲ್ಲಿನ ಛಾವಣಿಯ ಕೆಳಭಾಗಕ್ಕೂ ತಲುಪುತ್ತಿರಲಿಲ್ಲ. ಆ ಹುಲ್ಲಿನ ಗುಡಿಸಲೊಳಗೆ ಎರಡು ಕಲ್ಲಿನ ಕಂಬಗಳು ಅರಿಶಿಣ ಬಳಿದುಕೊಂಡು ನಿಂತಿದ್ದವು. ದಶಕಗಳು ಕಳೆದರೂ ಆ ಎರಡು-ಕಲ್ಲಿನ ಕಂಬಗಳ ಕೃತಿಗಳು ನನ್ನ ಮನದೊಳಗಿಂದ ಮಾಸಿಲ್ಲ. ಇನ್ನೂ ನನ್ನೊಳಗೆ ನಿಂತಿವೆ. ಇದೇ ಸ್ಥಳದಲ್ಲಿ ನನ್ನ ತಾಯಿ ನನಗೆ ಮತ್ತು ನನ್ನ ಏಳು ತಮ್ಮ ತಂಗಿಯಂದಿರಿಗೆ ಜನ್ಮ ನೀಡಿದಳು. ಸುಮಾರು ಹದಿನೈದು ಜನ ಈ ಒಂದೇ ಸೂರಿನಡಿ ವಾಸಿಸುತ್ತಿದ್ದೆವು. ಸಾತಗಾಂವ್‌ನ ಹಳ್ಳಿಯಾಗಿದ್ದ ನನ್ನೂರು ಬಾಂಬೆಯಿಂದ ಸುಮಾರು 500 ಕಿ.ಮೀ. ದೂರದಲ್ಲಿತ್ತು. ನನ್ನ ಹಳ್ಳಿಯು ಕಾಡು ಮತ್ತು ಮೃಗಗಳಿಂದ ಸುತ್ತುವರಿದಿತ್ತು. ನನ್ನ ಹುಟ್ಟಿದ ದಿನಾಂಕದ ಕುರಿತು ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ನನ್ನ ಪೋಷಕರ ಪ್ರಕಾರ ಅದು ಸುಮಾರು 1920ರ ವರ್ಷವಾಗಿತ್ತು.
ನನ್ನ ಮನೆತನದ ಹೆಸರಾದ ನಿಮ್ಗಾಡೆ ಮೂಲತಃ ಬೇವಿನ ಮರವನ್ನು ಆಧರಿಸಿದ ಹೆಸರು. ಈ ಬೇವಿನ ಮರವು ಅನೇಕ ನೋವು ಉಪಶಮನಕ ಗುಣಗಳನ್ನು ಹೊಂದಿದೆ. ಇದೇ ರೀತಿಯಾಗಿ ನಮ್ಮ ಅಸ್ಪಶ್ಯ ಮನೆತನಗಳಲ್ಲಿ ಅನೇಕ ಉಪಯುಕ್ತ ಗಿಡಗಳ ಹೆಸರನ್ನೇ ತಮ್ಮ ಮನೆತನದ ಹೆಸರನ್ನಾಗಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನನ್ನ ಭಾವ ಮೈದುನನ ಮನೆತನದ ಹೆಸರು ‘ಕೋಬ್ರಗಾಡೆ’ ಅದರರ್ಥ ತೆಂಗಿನ ಮರ, ಅದೇ ರೀತಿ ಮತ್ತೊಂದು ದಲಿತ ಮನೆತನದ ಹೆಸರು ‘ಅಂಬಗಾಡೆ’ ಅದರರ್ಥ ಮಾವಿನ ಗಿಡ, ‘ಜಮಗಾಡೆ’ ಎಂದರೆ ಸೀಬೆ ಮರ, ‘ಬೋರ್ಕರ್’ ಎಂದರೆ ಚೆಕ್ಕಕಾಯಿ. ಈ ಮಾದರಿಯ ಹೆಸರುಗಳು ಬುದ್ಧನ ಕಾಲದಿಂದಲೇ ಬಳಕೆಯಲ್ಲಿವೆ. ಇದು ಭಾರತದ ಅಸ್ಪೃಶ್ಯರು ಮೂಲಭೂತವಾಗಿ ಬೌದ್ಧರು ಎಂದು ಸಾಬೀತಾಗುತ್ತದೆ.
ನಾನು ಚಿಕ್ಕವನಿದ್ದಾಗ ನನ್ನ ತಾಯಿಯು ನನ್ನ ಆರೋಗ್ಯದ ಕುರಿತಾಗಿ ಚಿಂತಿಸುತ್ತಿದ್ದಳು. ಆ ಹಸಿವಿನ ದಿನಗಳಲ್ಲಿ ಕೆಲವೊಮ್ಮೆ ನನಗಾಗಿ ಹಿಟ್ಟನ್ನು ನೀರಿನೊಂದಿಗೆ ಕಲಸಿ ತಿನ್ನಿಸುತ್ತಿದ್ದಳು. ನಮ್ಮ ಮನೆಯಲ್ಲೊಂದು ಹೆಣ್ಣು ಕತ್ತೆಯಿತ್ತು. ಅದರ ಹಾಲನ್ನು ನನಗೆ ಕುಡಿಸುತ್ತಿದ್ದಳು. ನಾನು ಹಸಿವಿನಿಂದ ಅತ್ತಾಗ ನನ್ನ ಕೇರಿಯ ಅಕ್ಕಪಕ್ಕದ ಮನೆಯ ತಾಯಂದಿರು ನನ್ನನ್ನು ಎತ್ತಿಕೊಂಡು ತಮ್ಮ ಮಕ್ಕಳೊಂದಿಗೆ ನನಗೂ ಹಾಲನ್ನು ಕೊಡುತ್ತಿದ್ದರು. ಹೀಗಾಗಿ ನನಗೆ ಕೇರಿಯಲ್ಲಿ ಒಬ್ಬಳಿಗಿಂತಲೂ ಹೆಚ್ಚು ತಾಯಂದಿರಿದ್ದಾರೆ ಎಂದೇ ಅನಿಸುತ್ತಿತ್ತು, ಕತ್ತೆಯನ್ನೂ ಒಳಗೊಂಡು.
ನಾನು ವಾಸಿಸುತ್ತಿದ್ದ ಆಗಿನ ಹಳ್ಳಿಗಳ ಕುಟುಂಬಗಳು ಅವಿಭಾಜ್ಯ ಕುಟುಂಬಗಳಾಗಿದ್ದವು. ನನ್ನ ತಾತ ಬುಧನನ್ನು ‘ಅಜೋಬಾ’ ಎಂದು ಅಜ್ಜಿ ಸಗುಣಳನ್ನು ‘ಅಜಿಬಾಯಿ’ ಎಂದು ಕರೆಯುತ್ತಿದ್ದೆ. ನನ್ನ ತಾತ ಬುಧ ಅವರೊಂದಿಗೆ ಹರೆಯದಲ್ಲಿ ನಿಶ್ಚಿತಾರ್ಥಗೊಂಡ ಮಹಿಳೆ ಸಿಡುಬು ರೋಗದಿಂದ ಮೃತಳಾದಳು. ಇದರಿಂದ ತೀವ್ರವಾಗಿ ಬೇಸರಗೊಂಡ ನನ್ನ ತಾತ ಬುಧ ಒಬ್ಬ ಹಕೀಮನಾಗಿ ಹಳ್ಳಿಗಳನ್ನು ತಿರುಗುತ್ತಿದ್ದ. ಇಂತಹ ಸಂದರ್ಭದಲ್ಲಿ ಅಕಸ್ಮಾತ್ತಾಗಿ 30ರ ಹರೆಯದ, ಮಕ್ಕಳನ್ನು ಕಳೆದುಕೊಂಡ ವಿಧವೆಯಾದ ನನ್ನ ಅಜ್ಜಿ ಸಗುಣಳನ್ನು ಭೇಟಿಯಾಗಿ ಆಕೆಯನ್ನೇ ವಿವಾಹವಾದ. ಆ ಕಾಲದಲ್ಲಿ ನನ್ನ ತಾತ ವಿಧವೆಯನ್ನು ವಿವಾಹವಾಗಿದ್ದು ಒಂದು ಕ್ರಾಂತಿಕಾರಿ ನಡೆಯಾಗಿತ್ತು.
ಸುಮಾರು 30ರ ದಶಕದಲ್ಲಿನ ನಾನು ಹತ್ತು ವರ್ಷದವನಿದ್ದಾಗ ನನ್ನ ಸೋದರ ಮಾವ ನನಗೆ ಬಂಗಾರ ಬಣ್ಣದ ಅಂಚುಳ್ಳ ಟೋಪಿಯನ್ನು ಕೊಡಿಸಿದ್ದರು. ಇದನ್ನು ಧರಿಸಿ ನಾನು ಶ್ರೀಮಂತರ, ಮೇಲ್ಜಾತಿಗಳ ಬೀದಿಗಳಲ್ಲಿ ಹೆಮ್ಮೆಯಿಂದ ತಲೆಯೆತ್ತಿ ಅಡ್ಡಾಡುತ್ತಿದ್ದೆ. ಈ ಬಂಗಾರ ಬಣ್ಣದ ಅಂಚುಳ್ಳ ಟೋಪಿಯು ನನಗೆ ಒಂದು ಬಗೆಯ ಆತ್ಮ ವಿಶ್ವಾಸವನ್ನು ದೊರಕಿಸಿಕೊಟ್ಟಿತ್ತು. ಈ ಟೋಪಿಯನ್ನು ಧರಿಸಿದ ಕ್ಷಣ ನನ್ನ ಅಸ್ಪೃಶ್ಯತೆಯೇ ಕೊನೆಗೊಂಡಂತೆ ನನಗನ್ನಿಸುತ್ತಿತ್ತು. ಈ ಟೋಪಿಯು ನಾನು ತಲೆಯೆತ್ತಿ ಬದುಕುವ ಮೊದಲ ಅವಕಾಶವನ್ನು ದೊರಕಿಸಿತ್ತು. ಒಮ್ಮೆ ಈ ಟೋಪಿಯನ್ನು ಧರಿಸಿ ಗಲ್ಲಿಗಳಲ್ಲಿ ಅಡ್ಡಾಡುತಿದ್ದಾಗ ಭಾರತ್ ಮಾತಾಕಿ ಜೈ, ಮಹಾತ್ಮಾ ಗಾಂಧೀಕಿ ಜೈ, ಎಂದು ಕೂಗುತ್ತ ಹೊರಟ ಗುಂಪೊಂದು ನನ್ನನ್ನೂ ಹಾಗೂ ನನ್ನ ಟೋಪಿಯನ್ನು ಕಂಡು ತೀವ್ರವಾಗಿ ಆಕ್ಷೇಪಿಸಿ ನನ್ನ ಘನತೆಯ, ಜೀವದ ಟೋಪಿಯನ್ನು ಕಸಿದುಕೊಂಡು ಬೆಂಕಿಯಲ್ಲಿ ಬಿಸಾಡಿತು!! ಅಂದರೆ ನನ್ನ ಆತ್ಮಸಾಕ್ಷಿಯನ್ನು ಬೆಂಕಿಯಲ್ಲಿ ಸುಟ್ಟರು!! ಇದು ವಿದೇಶಿ ವಸ್ತುಗಳನ್ನು, ಬಟ್ಟೆಗಳನ್ನು ಸುಡಬೇಕೆಂದು ಗಾಂಧಿ ನೀಡಿದ ಕರೆಗೆ ಓಗೊಟ್ಟು ಮೇಲಿನ ಗುಂಪು ನನ್ನ ಟೋಪಿಯನ್ನು ಸುಟ್ಟಿತು ಎಂದು ಆನಂತರ ನನಗೆ ಗೊತ್ತಾಯಿತು. ನಾನಂತೂ ಮಣ್ಣಿನಲ್ಲಿ ಹೊರಳಾಡಿ ಅತ್ತಿದ್ದೆ. ಆಗ ಗಾಂಧಿಯವರ ನೇತೃತ್ವದಲ್ಲಿ ಮೇಲ್ವಾತಿಯ ಹಿಂದೂಗಳು ಮತ್ತು ಮುಸ್ಲಿಮ್ ನಾಯಕರು ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಚಳವಳಿಯನ್ನು ನಡೆಸುತ್ತಿದ್ದರು. ಮರುದಿನ ಗಾಂಧಿಯವರು ವಿದೇಶಿ ವಸ್ತುಗಳನ್ನು ನಾಶ ಮಾಡಬೇಕೆಂದು ಅವುಗಳನ್ನು ಸುಟ್ಟು ಹಾಕಬೇಕೆಂದು ಕರೆಕೊಟ್ಟಿದ್ದಾರೆಂದು ನಮಗೆ ತಿಳಿದುಬಂತು. ಇದನ್ನು ಕೇಳಿ ನನಗೆ ಮಹಾತ್ಮ್ಮಾ ಗಾಂಧಿಯವರು ಒಬ್ಬ ರಾಕ್ಷಸನಂತೆ ಗೋಚರಿಸಿದರು!
ನನ್ನ ತಾತ ಒಬ್ಬ ಜೀತದಾಳಾಗಿದ್ದ. ಸವರ್ಣೀಯರೊಬ್ಬರ ಮನೆಯಲ್ಲಿ ದುಡಿಯುತ್ತಿದ್ದ. ಈ ಜಮೀನ್ದಾರರ ಮನೆಗಳಲ್ಲಿ ಮದುವೆಗಳು ನಡೆದಾಗ ನಮ್ಮನ್ನು ಅತ್ಯಂತ ಹೀನಾಯವಾಗಿ, ಬಿಡುವಿಲ್ಲದೆ ದುಡಿಸಿಕೊಳ್ಳುತ್ತಿದ್ದರು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಅವರ ಜೀತಕ್ಕೆ ಮೀಸಲಾಗುತ್ತಿತ್ತು. ಇಂತಹ ಮದುವೆಯ ಸಂದರ್ಭದಲ್ಲಿ ಅಲಂಕಾರಭೂಷಿತನಾದ ಮದುಮಗನ ಸ್ವಗೃಹದಿಂದ ಮದುಮಗಳ ಮನೆಯವರೆಗೂ ಮೊವಣಿಗೆಯು ನಡೆಯುತ್ತಿತ್ತು. ಈ ಮೊವಣಿಗೆಗಾಗಿ ಅಂದವಾಗಿ ಸಿಂಗರಿಸಿದ ಎತ್ತಿನ ಬಂಡಿಯನ್ನು ಬಳಸುತ್ತಿದ್ದರು. ನಾನು ಮತ್ತು ನನ್ನ ಚಿಕ್ಕಪ್ಪ ಈ ಎತ್ತಿನ ಬಂಡಿಯ ಮುಂದೆ ಓಡುತ್ತಾ ಸಾಗಬೇಕು. ನಮ್ಮನ್ನು ಹಿಂಬಾಲಿಸಿ ಅಲಂಕಾರಭೂಷಿತ ಮದುಮಗನನ್ನು ಹೊತ್ತ ಎತ್ತಿನ ಗಾಡಿಯು ಅಟ್ಟಿಸಿಕೊಂಡು ಬರುತ್ತಿತ್ತು. ಅದನ್ನು ಇನ್ನಷ್ಟು ಹುರುಪುಗೊಳಿಸಲು ಅಸ್ಪಶ್ಯರಾದ ನಾವು ಬರಿಗಾಲಲ್ಲಿ ಮತ್ತಷ್ಟು ವೇಗದಿಂದ ಓಡಬೇಕಾಗುತ್ತಿತ್ತು. ಮತ್ತಷ್ಟು ಹುರುಪುಗೊಂಡು ನಮ್ಮನ್ನು ಅಟ್ಟಿಸಿಕೊಂಡು ಬರುವ ಮದುಮಗನ ಎತ್ತಿನ ಬಂಡಿ! ಈ ಬಿಡುವಿರದ ಓಟದ ಗುರಿ ಮದುಮಗಳ ಮನೆಯನ್ನು ತಲುಪುವವರೆಗೂ ನಿಲ್ಲುತ್ತಿರಲಿಲ್ಲ. ಕೆಲವೊಮ್ಮೆ ಮದುಮಗನಿಗೆ ಹಸಿವಾದರೆ ಅಥವಾ ದನಗಳಿಗೆ ನೀರಡಿಕೆಯಾದಾಗ ಮಾತ್ರ ಈ ಓಟಕ್ಕೆ ಬಿಡುವು ಸಿಗುತ್ತಿತ್ತು. ಮೇಲ್ಪಾತಿಯವರು ಸೃಷ್ಟಿಸಿದ್ದ ಅನೇಕ ಅಮಾನವೀಯ ಆಚರಣೆಗಳಲ್ಲೊಂದಾದ ಈ ನಮ್ಮ ಬರಿಗಾಲಿನ ಈ ಓಟದ ದುಃಸ್ಥಿತಿ ಅತ್ಯಂತ ಅಮಾನುಷವಾಗಿತ್ತು.
ಅಸ್ಪೃಶ್ಯತೆಯಿಂದಾಗಿ ನಾವು ದನಗಳೊಂದಿಗೆ ಸ್ಪರ್ಧಿಸುವಂತಹ ಕ್ರೌರ್ಯದ ಬದುಕಿಗೆ ತುತ್ತಾಗಿದ್ದೆವು. ಆದರೆ ನಾವೆಲ್ಲ ಅಸಹಾಯಕರಾಗಿದ್ದೆವು. ಮದುವೆ ಮುಗಿದ ನಂತರ ಆಹ್ವಾನಿತರ ಊಟದ ನಂತರ ನಮ್ಮನ್ನು ಊಟಕ್ಕೆ ಕರೆಯುತ್ತಿದ್ದರು. ಮೇಲ್ಜಾತಿಯವರು ಉಂಡು ಬಿಟ್ಟಂತಹ ಊಟವನ್ನು ನಮಗೆ ನೀಡುತ್ತಿದ್ದರು. ಕಸದಗುಂಡಿಯಲ್ಲಿ ಕುಳ್ಳರಿಸಿ ನಮಗೆ ಊಟ ನೀಡುತ್ತಿದ್ದರು.
ನಮ್ಮ ಕಡೆಯ ಹಳ್ಳಿಗಳಲ್ಲಿ ಸತ್ತ ದನಗಳನ್ನು ಏನು ಮಾಡಬೇಕೆಂದು ಅದರ ಮಾಲಕರನ್ನು ಕೇಳಿದಾಗ ‘ಮತ್ತೇನು? ನಮ್ಮ ಹಳ್ಳಿಯ ಆಚರಣೆಯನ್ನು ಪಾಲಿಸಿ’ ಎಂದು ಹೇಳುತ್ತಿದ್ದರು. ಆಗ ನನ್ನ ಚಿಕ್ಕಪ್ಪ ಮೊಣಕಾಲೂರಿ, ಎರಡೂ ಕೈಗಳನ್ನು ಎದೆಯ ಬಳಿ ಕಟ್ಟಿಕೊಂಡು ದೈನೇಸಿಯಾಗಿ ಒಡೆಯರೇ ನಿಮ್ಮ ಪಾದಕ್ಕೆ ಬೀಳುತ್ತೇನೆ. ಇಲ್ಲಿನ ಪದ್ಧತಿಯ ಪ್ರಕಾರ ದನವನ್ನು ದಲಿತರಿಗೆ ಕೊಡಬೇಕು. ಅವರು ಅದರ ಚರ್ಮವನ್ನು ಸುಲಿದು ಕೊತ್ವಾಲನಿಗೆ ಕೊಡುತ್ತಾರೆ. ಮಾಂಸವನ್ನು ದಲಿತರು ಕೊಂಡೊಯ್ಯುತ್ತಾರೆ’ ಎಂದು ಹೇಳುತ್ತಿದ್ದ. ಆಗ ಮಾಲಕ ತಲೆಯಾಡಿಸುತ್ತ ಒಪ್ಪಿಗೆ ಸೂಚಿಸುತ್ತಿದ್ದ. ಆಗ ದಲಿತರಾದ ಮಹಾರ್ ಜಾತಿಯವರು ಸತ್ತ ದನವನ್ನು ಎಳೆದುಕೊಂಡು ಮನೆಗೆ ತರುತ್ತಿದ್ದೆವು. ನನ್ನ ಅಜ್ಜಿ ಸಗುಣ ಸತ್ತ ದನದ ಕೆಲವು ಪೌಷ್ಟಿಕ ಅಂಗಗಳನ್ನು ಸುಲಿದು ಅವುಗಳನ್ನು ಔಷಧಿಯಾಗಿ ತಯಾರಿಸುತ್ತಿದ್ದಳು. ನಂತರ ಅಂದಿನ ಮಹಾರ್ ಕೇರಿಗಳಲ್ಲಿ ಹಬ್ಬದ ವಾತಾವರಣ. ದನದ ಬಾಡೂಟ ಆಗ ನಮಗೆಲ್ಲ ಸ್ವರ್ಗಕ್ಕೆ ಸಮನಾಗಿತ್ತು.
ನಾನು ಏಳು ವರ್ಷದವನಾಗಿದ್ದಾಗ ಹೊಲಗಳಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದೆ. ಕಳೆ ಕೀಳುವುದು, ದನ ಮೇಯಿಸುವುದು ನನ್ನ ಕೆಲಸವಾಗಿತ್ತು. ಕುಡಿಯಲಿಕ್ಕಾಗಿ ಸವರ್ಣೀಯರ ಬಾವಿಗಳನ್ನು ಮುಟ್ಟಿದ್ದಕ್ಕೆ, ಮೇಲ್ಜಾತಿಯವರ ಮನೆಗಳ ಮೆಟ್ಟಲನ್ನು ಹತ್ತಿ ಒಳಪ್ರವೇಶಿಸಿದ್ದಕ್ಕೆ ನನಗೆ ಮೈತುಂಬ ಏಟುಗಳು ಬೀಳುತ್ತಿದ್ದವು. ಆದರೆ ನಾನು ಈ ಅವಮಾನಗಳನ್ನು ನುಂಗಿಕೊಂಡು ಹೊಳೆಯಲ್ಲಿ ನನ್ನ ಕೈ ಮತ್ತು ಬಾಯಿಯನ್ನು ತೊಳೆದುಕೊಂಡು ಗಾಯವು ಬಹಿರಂಗವಾಗಿ ಗೋಚರಿಸದಂತೆ ಎಚ್ಚರಿಕೆ ವಹಿಸುತ್ತಿದ್ದೆ. ಈ ರೀತಿಯಾಗಿ ಶಾಲೆಯನ್ನು ಪ್ರವೇಶಿಸಿದ್ದಕ್ಕಾಗಿ, ಬಾವಿ ನೀರನ್ನು ಮುಟ್ಟಿದ್ದಕ್ಕಾಗಿ ನನಗೆ ಬಿದ್ದ ಏಟುಗಳ ಕುರಿತಾಗಿ ನನ್ನ ಹಳ್ಳಿಯಲ್ಲಿ ಯಾರೊಬ್ಬರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈ ಸಮಾಜದ ಜಾತಿ ಆಧಾರಿತ ಹಲ್ಲೆಗಳ ಹಿನ್ನೆಲೆಗಳೆಲ್ಲವನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದ ನನ್ನ ಪೋಷಕರಿಗೆ ಹರಿದ ನನ್ನ ಬಟ್ಟೆಗಳು ಎಲ್ಲವನ್ನೂ ಬಯಲುಗೊಳಿಸಿತ್ತು. ಹಾಗೂ ಇದಕ್ಕೆಲ್ಲ ಅವರು ಹೊಂದಿಕೊಂಡಂತಿದ್ದರು. ಆದರೆ ನಾನು ನನ್ನೊಳಗೆ ಬಲು ದೊಡ್ಡ ಪದವೀಧರನಾಗುವ ಕನಸನ್ನು ಗಟ್ಟಿಗೊಳಿಸುತ್ತ, ನನ್ನನ್ನು ನಾನು ಸ್ವತಃ ಅಭಿವೃದ್ಧಿಗೊಳಿಸಿಕೊಳ್ಳುತ್ತ, ಶೈಕ್ಷಣಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸ್ವಾವಲಂಬನೆ ಸಾಧಿಸುವತ್ತ ಪಯಣಿಸತೊಡಗಿದೆ.
1934ರಲ್ಲಿ ನನ್ನ 14ನೇ ವಯಸ್ಸಿನಲ್ಲಿ ನಾನು ಶಾಲೆ ಸೇರಿಕೊಂಡೆ. ನನ್ನ ಹೆಸರನ್ನು ನೋಂದಾಯಿಸಿಕೊಳ್ಳುವ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರು ಅಸ್ಪೃಶ್ಯನಾಗಿದ್ದಕ್ಕಾಗಿ ನಾನು ತರಗತಿಯೊಳಗೆ ಪ್ರವೇಶಿಸಬಾರದೆಂದು ಕಟ್ಟಪ್ಪಣೆಯನ್ನು ಕೊಟ್ಟಿದ್ದರು. ನಾನು ಶಾಲೆಯ ಹೊರಗಿನ ಬಿಸಿಲಿನ ವರಾಂಡದಲ್ಲಿ ನಿಂತು ಮೂಲಕ ಪಾಠವನ್ನು ಕಲಿಯಬೇಕಾಯಿತು. ನನ್ನ ಆ ಶಾಲೆಯ ಒಂದು ದೊಡ್ಡ ಹಾಲ್‌ನಲ್ಲಿ ನಾಲ್ಕು ವಿವಿಧ ತರಗತಿಗಳ ಪಾಠಗಳು ನಡೆಯುತ್ತಿದ್ದವು. ಅಸ್ಪೃಶ್ಯನಾದ ನಾನು ಹೊರಗೆ ಬಿಸಿಲಿನಲ್ಲಿ ನಿಂತುಕೊಂಡು ಒಳಗಡೆ ನಡೆಯುವ ವಿಭಿನ್ನ ತರಗತಿಗಳ ಪಾಠಗಳನ್ನು ಕಲಿಯಬೇಕಾಗಿತ್ತು. ನಮಗೆ ಬಾಯಾರಿಕೆಯಾದಾಗಲೂ ಶಾಲೆಯ ಬಾವಿಯಿಂದ ನೀರನ್ನು ಕುಡಿಯುವಂತಿರಲಿಲ್ಲ. ನೀರಿಗಾಗಿ ದೂರದ ನಮ್ಮದೇ ಜಾತಿಯ ಹಟ್ಟಿಗಳಿಗೆ ಹೋಗಬೇಕಾಗುತ್ತಿತ್ತು. ನನ್ನ ಹಳ್ಳಿಯಾದ ಸಾತಗಾಂವ್‌ನಿಂದ ಈ ಶಾಲೆಗೆ ಸುಮಾರು ಏಳೆಂಟು ಹುಡುಗರು ಹೋಗುತ್ತಿದ್ದೆವು. ಇವರಲ್ಲಿ ನಾನೊಬ್ಬನೇ ಅಸ್ಪೃಶ್ಯನಾಗಿದ್ದೆ. ಆನಂತರ ಇನ್ನೂ ಮೂವರು ದಲಿತರು ನನ್ನ ಜೊತೆಗೂಡಿದರು. ನಾವೆಲ್ಲ ಒಂದೇ ಗುಂಪಿನವರಾಗಿದ್ದು ಈ ಶ್ರೇಣೀಕೃತ ಸಮಾಜದಲ್ಲಿ ಸಹಜವಾಗಿತ್ತು. ಮಳೆಗಾಲದ ದಿನಗಳು ನಮಗೆ ಅತ್ಯಂತ ಕಷ್ಟದ ದಿನಗಳು, ಬರಿಗಾಲಲ್ಲಿ ನಡೆಯುತ್ತಿದ್ದುರಿಂದ ಕಾಲಲ್ಲಿ ಚುಚ್ಚಿಕೊಳ್ಳುತ್ತಿದ್ದ ಮುಳ್ಳುಗಳಿಂದಾಗಿ ಅಪಾರ ಯಾತನೆಯನ್ನು ಅನುಭವಿಸಬೇಕಾಗಿತ್ತು. ಜೊತೆಗೆ ತೋಳ, ಹಾವುಗಳ ಕಾಟ. ಆದರೆ ಮೇಲ್ಜಾತಿಯ ಹುಡುಗರಿಗೆ ಈ ನೈಸರ್ಗಿಕವಾಗಿ ಅಪಾಯಕಾರಿಯಾದ ಜೀವಜಂತುಗಳಿಗಿಂತ ವ್ಯವಸ್ಥೆಯೊಳಗೆ ಬದುಕುತ್ತಿರುವ ಅಸ್ಪಶ್ಯರಾದ ನಾವು ಹೆಚ್ಚು ಬೆದರಿಕೆಯ, ಅನಿಷ್ಪದ ಸೂಚನೆಗಳಾಗಿದ್ದೆವು.
ನನ್ನ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಭೀಮ್‌ರಾವ್ ಅಂಬೇಡ್ಕರ್ ಹೆಸರನ್ನು ಕೇಳಿದ ಘಟನೆಯ ವಿವರಗಳು ಇಂದಿಗೂ ನನಗೆ ರೋಮಾಂಚನವನ್ನುಂಟು ಮಾಡುತ್ತವೆ. 1936ರ ದೀಪಾವಳಿ ಸಂದರ್ಭದಲ್ಲಿ ನನ್ನ ತಂದೆಯವರು ನಮ್ಮ ಸಾತಗಾಂವ್ ಹಳ್ಳಿಯ ಎಲ್ಲ ಅಸ್ಪೃಶ್ಯ ಸಮುದಾಯದ ಕುಟುಂಬಗಳನ್ನು ಒಟ್ಟಾಗಿ ಸೇರಿಸಿ ಮೊಟ್ಟ ಮೊದಲ ಬಾರಿಗೆ ದಲಿತ ಸಮಾವೇಶವನ್ನು ಆಯೋಜಿಸಿದ್ದರು. ಅಲ್ಲಿ ನನಗೆ ತಮ್ಮ ಭಾಷಣವನ್ನು ಬರೆದುಕೊಳ್ಳುವಂತೆ ಸೂಚಿಸಿದರು. ನಂತರ ಈ ಭಾಷಣವನ್ನು ನೆರೆದ ಜನತೆಯ ಮುಂದೆ ಓದಲು ಹೇಳಿದರು. ಅಂದು ನಾನು ಓದಿದ ಆ ಭಾಷಣದ ಸಾರಾಂಶ ಹೀಗಿತ್ತು: ‘‘ನಮ್ಮ ದಲಿತ ಜನಾಂಗದಲ್ಲಿ ಜನಿಸಿ ಉನ್ನತ ವ್ಯಾಸಂಗವನ್ನು ಪಡೆದ ಅತ್ಯಂತ ಮೇಧಾವಿಯ ಹೆಸರು ಡಾ. ಭೀಮ್‌ರಾವ್ ಅಂಬೇಡ್ಕರ್. ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿ ಬಿಳಿಯ ಜನರ ನೆಲದಲ್ಲಿ ಡಾಕ್ಟರೇಟನ್ನು ಪಡೆದು ಭಾರತಕ್ಕೆ ಬ್ಯಾರಿಸ್ಟರ್ ಆಗಿ ಮರಳಿದ್ದಾರೆ. ಅಸ್ಪೃಶ್ಯರಾದ ನಾವೆಲ್ಲರೂ ಮೇಲ್ಜಾತಿಯವರ ಸಮಾನರೆಂದೂ, ನಮಗೆ ಊರಿನ ಬಾವಿಗಳ ನೀರನ್ನು ಕುಡಿಯುವ ಹಕ್ಕಿದೆಯೆಂದೂ, ದೇವಸ್ಥಾನಗಳಲ್ಲಿ ಪ್ರವೇಶಿಸಿ ಪೂಜಿಸುವ ಹಕ್ಕಿದೆಯೆಂದೂ ಮಾನ್ಯ ಅಂಬೇಡ್ಕರ್ ಅವರು ಹೇಳುತ್ತಾರೆ. ನಾವೆಲ್ಲ ಈ ಮೇಲ್ಜಾತಿಯವರ ಮುಂದೆ ಕೈಯೊಡ್ಡಿ ಬೇಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಆದೇಶಿಸಿದ್ದಾರೆ. ನಾವು ಸತ್ತ ದನದ ಮಾಂಸವನ್ನು ತಿನ್ನಬಾರದೆಂದು ಹೇಳುತ್ತಾರೆ. ನಮ್ಮ ಮಕ್ಕಳೆಲ್ಲ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಅಂಬೇಡ್ಕರ್ ಅವರು ಒತ್ತಾಯಿಸಿದ್ದಾರೆ. ಇದನ್ನು ಸಾಧಿಸಲು ನಮ್ಮಾಳಗಿನ ಜಾತೀಯ ತಾರತಮ್ಯವನ್ನು ತ್ಯಜಿಸಿ ಒಗ್ಗಟ್ಟಾಗಿ ಹೋರಾಡಬೇಕೆಂದು ಅಂಬೇಡ್ಕರ್‌ಜೀಯವರ ಬಯಕೆ.’’







