ಅಸ್ಸಾಮಿನ ಹಾವಾಡಿಗ ವೈದ್ಯ!

ಅಸ್ಸಾಮಿನ ವೈದ್ಯ ಡಾ.ಸುರಜಿತ್ ಗಿರಿ ಯಾವುದೇ ವ್ಯಕ್ತಿ ಹಾವಿನ ಕಡಿತದಿಂದ ಸಾಯದಂತೆ ನೋಡಿಕೊಳ್ಳುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ವಿಶೇಷಜ್ಞರಾಗಿ ಮುಂಚೂಣಿಯಲ್ಲಿರುವ ಅವರು ಈವರೆಗೆ ಹಾವು ಕಡಿತಕ್ಕೊಳಗಾಗಿದ್ದ 1,200ಕ್ಕೂ ಅಧಿಕ ಜನರನ್ನು ರಕ್ಷಿಸಿದ್ದಾರೆ.
ಇದು ಆರಂಭವಾಗಿದ್ದು 2008ರಲ್ಲಿ. ಯುವತಿ ಯೋರ್ವಳನ್ನು ನಾಗರ ಹಾವು ಕಚ್ಚಿದ್ದು,ನಾಟಿ ವೈದ್ಯರು ಕೈಚೆಲ್ಲಿದ ಬಳಿಕ ಆಕೆಯನ್ನು ಸಮೀಪದ ಶಿವಸಾಗರ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿಯ ವೈದ್ಯರಿಗೆ ಹಾವು ಕಡಿತಕ್ಕೆ ಚಿಕಿತ್ಸೆ ನೀಡಿ ಹೆಚ್ಚಿನ ಅನುಭವವಿರಲಿಲ್ಲ. ದಿಬ್ರುಗಡದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಯುವತಿ ಮೃತಪಟ್ಟಿದ್ದಳು. ಅಂದು ರಾತ್ರಿ ಶಿವಸಾಗರ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ,ಆಗಿನ್ನೂ 20ರ ಹರೆಯದಲ್ಲಿದ್ದ ಅರಿವಳಿಕೆ ತಜ್ಞ ಡಾ.ಗಿರಿಯವರು ಈ ಘಟನೆಯಿಂದ ತೀವ್ರ ವಿಚಲಿತಗೊಂಡಿದ್ದರು. ಅವರು ಹಾವಿನ ಕಡಿತಗಳು ಮತ್ತು ಪ್ರತಿವಿಷದ ಬಗ್ಗೆ ಅಧ್ಯಯವನ್ನು ಆರಂಭಿಸಿದ್ದರು ಮತ್ತು ಇದು ಅವರನ್ನು ಇಂದು ಅಸ್ಸಾಮಿನಲ್ಲಿ ಮುಂಚೂಣಿಯಲ್ಲಿರುವ ಹಾವು ಕಡಿತ ಚಿಕಿತ್ಸಕನನ್ನಾಗಿ ಮಾಡಿದೆ.
2008ರಲ್ಲಿ ಶಿವಸಾಗರದಲ್ಲಿ ಮಂಡಲ ಹಾವಿನ ಕಡಿತಕ್ಕೊಳಗಾಗಿದ್ದ 50ರ ಹರೆಯದ ರೈತನ ಪ್ರಾಣವನ್ನು ಕಾಪಾಡಿದ್ದು ಹಾವಿಕ ಕಡಿತಕ್ಕೆ ಚಿಕಿತ್ಸಕನಾಗಿ ಡಾ.ಗಿರಿಯವರ ಮೊದಲ ಅನುಭವವಾಗಿತ್ತು.
ಆಗ ಡಾ.ಗಿರಿ ಶಿವಸಾಗರದ ಪಟ್ಟಣದಿಂದ 10 ಕಿ.ಮೀ.ದೂರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಹಾವು ಕಡಿತಕ್ಕೊಳಗಾದ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದ್ದಕ್ಕೆ ಕೇವಲ ಮೂಲಸೌಕರ್ಯಗಳ ಕೊರತೆ ಕಾರಣವಾಗಿರಲಿಲ್ಲ, ಹೆಚ್ಚಿನ ಜನರು ಪ್ರತಿವಿಷದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಹಿಂಜರಿಯುತ್ತಿದ್ದರು.
‘ಆಗಿನ ದಿನಗಳಲ್ಲಿ ಜನರು ನಾಟಿ ವೈದ್ಯರನ್ನು, ಮಂತ್ರವಾದಿಗಳನ್ನು ಹೆಚ್ಚಾಗಿ ನಂಬುತ್ತಿದ್ದರು. ಪ್ರತಿವಿಷದ ಚುಚ್ಚುಮದ್ದು ತೆಗೆದುಕೊಳ್ಳುವಂತೆ ನಾನು ರೋಗಿಗಳನ್ನು ಅಕ್ಷರಶಃ ಬೇಡಿಕೊಳ್ಳಬೇಕಿತ್ತು. ಕೆಲವು ರೋಗಿಗಳು ಗುಣಮುಖರಾದ ಬಳಿಕ ಜನರು ನನ್ನ ಚಿಕಿತ್ಸಾ ವಿಧಾನವನ್ನು ನಂಬಲು ಆರಂಭಿಸಿದ್ದರು’ಎಂದು ಡಾ.ಗಿರಿ ನೆನಪಿಸಿಕೊಂಡರು.
ಆರಂಭಿಕ ಅಡೆತಡೆಗಳ ಬಳಿಕ ಡಾ.ಗಿರಿಯವರ ಖ್ಯಾತಿಯು ವೇಗವಾಗಿ ಹೆಚ್ಚಿತ್ತು. 2008ರಲ್ಲಿ ಒಂದಿಬ್ಬರು ಹಾವು ಕಡಿತದ ರೋಗಿಗಳು ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದರು,ಇಂದು ಅವರು ಪ್ರತಿ ತಿಂಗಳೂ 60-65 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾವು ಕಡಿತ ಗ್ರಾಮೀಣ ಅಸ್ಸಾಮಿನಲ್ಲಿ ತೀರಾ ಸಾಮಾನ್ಯವಾಗಿದೆ. ಭಾರತದಲ್ಲಿ ವರ್ಷವೊಂದಕ್ಕೆ ಸರಾಸರಿ 58,000 ಜನರು ಹಾವು ಕಡಿತಕ್ಕೆ ಬಲಿಯಾಗುತ್ತಿದ್ದು,ಇದು ಜಾಗತಿಕ ಹಾವು ಕಡಿತ ಸಾವುಗಳ ಸುಮಾರು ಶೇ.50ರಷ್ಟಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಡಾ.ಗಿರಿಯವರ ದೂರವಾಣಿ ಸಂಖ್ಯೆ ಲಭ್ಯವಿರುವುದರೊಂದಿಗೆ ಅಪರಾತ್ರಿಗಳಲ್ಲೂ ರಾಜ್ಯಾದ್ಯಂತದಿಂದ ಡಾ.ಗಿರಿಯವರಿಗೆ ಆತಂಕದ ಕರೆಗಳು ಬರುವುದು ಸಾಮಾನ್ಯವಾಗಿದೆ.
‘ವ್ಯಕ್ತಿಗೆ ವಿಷಪೂರಿತ ಹಾವು ಕಚ್ಚಿದಾಗ ರೋಗಿ ಮತ್ತು ಆತನ/ಆಕೆಯ ಆಪ್ತರು ತುಂಬ ಭೀತಿಯಲ್ಲಿರುತ್ತಾರೆ. ಅಂತಿಮವಾಗಿ ರೋಗಿ ಚೇತರಿಸಿಕೊಂಡ ಬಳಿಕ ಅವರ ಮುಖಗಳಲ್ಲಿಯ ನೆಮ್ಮದಿಯು ಓರ್ವ ವೈದ್ಯನಾಗಿ ನನಗೆ ಅತ್ಯಂತ ತೃಪ್ತಿಯನ್ನು ನೀಡುತ್ತದೆ ’ಎಂದು ಡಾ.ಗಿರಿ ಹೇಳಿದರು.
ಡಾ.ಗಿರಿಯವರಿಂದಾಗಿ ಅವರು ಕಾರ್ಯ ನಿರ್ವಹಿಸುತ್ತಿರುವ ಡೆಮೊ ಸಮುದಾಯ ಆರೋಗ್ಯ ಕೇಂದ್ರವು ಇಂದು ರಾಜ್ಯದಲ್ಲಿಯೇ ಅತ್ಯಂತ ಖ್ಯಾತ ಹಾವು ಕಡಿತ ಚಿಕಿತ್ಸಾ ಕೇಂದ್ರವಾಗಿದೆ. 2020ರಿಂದ ಈ ಆಸ್ಪತ್ರೆಯಲ್ಲಿ ಹಾವು ಕಡಿತ ರೋಗಿಗಳಿಗಾಗಿಯೇ ವಿಶೇಷ ವಾರ್ಡ್‌ನ್ನು ಸ್ಥಾಪಿಸಲಾಗಿದೆ. ಡಾ.ಗಿರಿ ಅಪಾಯವನ್ನು ಗುರುತಿಸಲು ಮತ್ತು ಹಾವು ಕಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತನ್ನ ಆಸ್ಪತ್ರೆಯಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡವೊಂದನ್ನು ಕಟ್ಟಿದ್ದಾರೆ. ಇದರೊಂದಿಗೆ ಕೆಲವು ಸಾರ್ವಜನಿಕರೂ ಅವರೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಲಭ್ಯವಿಲ್ಲದಿದ್ದರೆ ಈ ಸ್ವಯಂಸೇವಕರು ಹಾವು ಕಡಿತಕ್ಕೊಳಗಾದವರನ್ನು ತಮ್ಮ ಬೈಕ್‌ಗಳಲ್ಲಿ ಡೆಮೊ ಆಸ್ಪತ್ರೆಗೆ ಸಾಗಿಸುತ್ತಾರೆ.
ಹಾವು ಕಡಿತದ ಕುರಿತು ಡಾ.ಗಿರಿಯವರ ನಿರಂತರ ಅಧ್ಯಯನದಿಂದಾಗಿ ಅವರು ಕೆಲವೊಂದು ವಿನೂತನತೆಗಳನ್ನು ಆವಿಷ್ಕರಿಸಲು ಸಾಧ್ಯವಾಗಿದೆ. ಅಸ್ಸಾಮಿನಲ್ಲಿ ಸಾಮಾನ್ಯವಾಗಿರುವ ಮಂಡಲ ಹಾವಿನ ಕಡಿತಕ್ಕೊಳಗಾದವರಲ್ಲಿ ಸಾಂಪ್ರದಾಯಿಕ ಪ್ರತಿವಿಷ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ಗೊತ್ತಾದಾಗ ಈ ಹಾವಿನ ಕಡಿತಕ್ಕಾಗಿ ಮ್ಯಾಗ್ನೀಷಿಯಂ ಸಲ್ಫೇಟ್ ನೀಡುವ ತನ್ನದೇ ಆದ ಚಿಕಿತ್ಸಾ ವಿಧಾನವನ್ನು ಅವರು ರೂಪಿಸಿಕೊಂಡಿದ್ದಾರೆ. ಅವರ ಈ ಸಾಧನೆ ವಿಷಶಾಸ್ತ್ರ ಕುರಿತ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಈ ಪದ್ಧತಿಯ ಮೂಲಕ ಡಾ.ಗಿರಿ ಮಂಡಲ ಹಾವಿನ ಕಡಿತಕ್ಕೊಳಗಾಗಿದ್ದ ಕನಿಷ್ಠ 100 ಜನರ ಜೀವ ಉಳಿಸಿದ್ದಾರೆ.
ಕಳೆದ ವರ್ಷ ಡಾ.ಗಿರಿ ಮತ್ತವರ ತಂಡ ‘ಶೂನ್ಯ ಮರಣ’ದ ಸಂಭ್ರಮವನ್ನು ಆಚರಿಸಿದ್ದಾರೆ. 2021ರಲ್ಲಿ ಹಾವು ಕಡಿತಕ್ಕೊಳ ಗಾಗಿದ್ದ 464 ಜನರನ್ನು ಡೆಮೊ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು,ಈ ಪೈಕಿ 53 ಜನರು ಅತ್ಯಂತ ವಿಷಪೂರಿತ ಹಾವುಗಳ ಕಡಿತಕ್ಕೆ ಗುರಿಯಾಗಿದ್ದರು. ಗಿರಿ ಮತ್ತು ಅವರ ತಂಡ ಪ್ರತಿಯೊಬ್ಬರ ಜೀವವನ್ನೂ ಉಳಿಸಿತ್ತು.
ಕೃಪೆ:theindianexpress.com







