ಕಾಂಗ್ರೆಸ್ ಭ್ರಷ್ಟಾಚಾರದ ಕಡತಗಳಿದ್ದರೆ ಅದನ್ನಿಟ್ಟು ಪೂಜೆ ಮಾಡ್ತಾ ಇದ್ದೀರಾ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು, ಎ.18: ಕಾಂಗ್ರೆಸ್ ಭ್ರಷ್ಟಾಚಾರದ ಕಡತಗಳು ನಮ್ಮ ಬಳಿ ಇವೆ ಎನ್ನುತ್ತಿರುವ ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತು. ಈ ಅವಧಿಯಲ್ಲೇನು ಪೂಜೆ ಮಾಡ್ತಾ ಇದ್ರಾ? ಕಡತಗಳಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಅದು ಅಪರಾಧ ಅಲ್ವ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದ ಟಿ.ಕೆ.ಲೇಔಟ್ ನ ತಮ್ಮ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಕಡತಗಳು ನಮ್ಮ ಬಳಿ ಇದೆ ಎನ್ನುತ್ತಿರುವ ಬಿಜೆಪಿಯವರು, ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತು ಆಗ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳದೆ ಏನು ಕಡ್ಲೆಪುರಿ ತಿನ್ನುತ್ತಿದ್ದರ? ಇಲ್ಲ ಕಡುಬು ತಿನ್ನುತ್ತಿದ್ದರ ಎಂದು ವ್ಯಂಗ್ಯವಾಡಿದರು.
ನಾವು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ದೊಡ್ಡ ಮಟ್ಟದ ಹೋರಾಟ ಪ್ರಾರಂಭ ಮಾಡಿದ ಮೇಲೆ ಇವರು ನಮ್ಮನ್ನು ಭ್ರಷ್ಟಾಚಾರಿಗಳು ಎನ್ನುತ್ತಿದ್ದಾರೆ. ನಾವು ಭ್ರಷ್ಟಾಚಾರ ಮಾಡಿದ್ದರೆ ಇವರು ನಮ್ಮ ಮೇಲೆ ಈ ಹಿಂದೆಯೇ ಕ್ತಮ ಕೈಗೊಳ್ಳ ಬಹುದಿತ್ತು ತಾನೆ? ಇವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತು ಆಗಲಿಂದ ಏಕೆ ಇದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ? ಹೋಗಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿಯವರು ಐದು ವರ್ಷ ವಿರೋಧ ಪಕ್ಷದಲ್ಲಿದ್ರಲ್ಲ ಆಗ ಏಕೆ ಈ ವಿಚಾರ ಮಾತನಾಡಲಿಲ್ಲ. ಇದು ವಿರೋಧ ಪಕ್ಷವಾಗಿ ಬಿಜೆಪಿಯ, ಬಸವರಾಜ ಬೊಮ್ಮಾಯಿಯವರ ವೈಫಲ್ಯ ಅಲ್ವ ಎಂದು ಹರಿಹಾಯ್ದರು.
ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗೊತ್ತಿದ್ದರೂ ಮಾತನಾಡದಿರುವುದು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಅಪರಾಧ. ಕಾಂಗ್ರಸ್ ಭ್ರಷ್ಟಾಚಾರದ ದಾಖಲೆಗಳಿದ್ದ ಮೇಲೆ ಕ್ತಮ ಜರುಗಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.







