2011ರಲ್ಲಿ 'ಪ್ರಚೋದನಾತ್ಮಕ' ಲೇಖನ ಬರೆದ ಆರೋಪ: ಕಾಶ್ಮೀರ ವಿವಿ ಪಿಎಚ್‍ಡಿ ವಿದ್ಯಾರ್ಥಿ ಅಬ್ದುಲ್ ಆಲಿ ಫಝಿಲಿ ಬಂಧನ

ಶ್ರೀನಗರ್ : ಕಾಶ್ಮೀರ ವಿಶ್ವವಿದ್ಯಾಲಯದ ಫಾರ್ಮಾಸ್ಯೂಟಿಕಲ್ಸ್ ವಿಭಾಗದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಅಬ್ದುಲ್ ಆಲಿ ಫಝಿಲಿ ಎಂಬವರನ್ನು 2011ರಲ್ಲಿ ದಿ ಕಾಶ್ಮೀರಿ ವಾಲಾ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಅವರ 'ಪ್ರಚೋದನಾತ್ಮಕ' ಲೇಖನವೊಂದರ ಸಂಬಂಧ ಜಮ್ಮು ಮತ್ತು ಕಾಶ್ಮೀರ ತನಿಖಾ ಏಜನ್ಸಿ ರವಿವಾರ ಬಂಧಿಸಿದೆ.
ಈಗಾಗಲೇ ಬಂಧಿತರಾಗಿರುವ ಕಾಶ್ಮೀರ್ ವಾಲಾ ಸಂಪಾದಕ ಫಾಹದ್ ಶಾ ಅವರ ಶ್ರೀನಗರದಲ್ಲಿನ ರಾಜಭಾಗ್ ಮತ್ತು ಸೌರಾ ಪ್ರದೇಶದ ನಿವಾಸ ಹಾಗೂ ಫಝಿಲಿ ಅವರ ಹುಮ್‍ಹಾನ ಪ್ರದೇಶದ ನಿವಾಸದ ಮೇಲೆ ಏಜನ್ಸಿ ದಾಳಿ ನಡೆಸಿದ ನಂತರ ಫಝಿಲಿ ಅವರನ್ನು ಬಂಧಿಸಿದೆ.
"ನವೆಂಬರ್ 6, 2011ರಂದು ಪ್ರಕಟವಾಗಿದ್ದ ಫಝಿಲಿ ಅವರ ಲೇಖನ `ದಿ ಶ್ಯಾಕಲ್ಸ್ ಆಫ್ ಸ್ಲೇವರಿ ವಿಲ್ ಬ್ರೇಕ್' ಎಂಬ ಲೇಖನ ಬಹಳ ಪ್ರಚೋದನಾತ್ಮಕವಾಗಿದ್ದು, ದೇಶದ್ರೋಹದ ವಿಚಾರ ಹೊಂದಿದ್ದು ಹಾಗೂ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಿ ಯುವಜನರನ್ನು ಹಿಂಸೆ ಹಾಗೂ ಉಗ್ರವಾದದ ದಾರಿಯಲ್ಲಿ ನಡೆಯಲು ಪ್ರೇರೇಪಿಸಿದೆ" ಎಂದು ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ಸಂಬಂಧಿ ಪ್ರಕರಣಗಳ ತನಿಖೆಗೆಂದು ರಚಿಸಲಾಗಿರುವ ಜಮ್ಮು ಕಾಶ್ಮೀರ ತನಿಖಾ ಏಜನ್ಸಿ ಹೇಳಿದೆ.
ವಾಹದ್ ಮತ್ತು ಫಝಿಲಿ ಅವರ ನಿವಾಸದ ಮೇಲಿನ ದಾಳಿಗಳಲ್ಲಿ ತನಿಖಾ ಏಜನ್ಸಿ ಕಂಪ್ಯೂಟರ್, ಲ್ಯಾಪ್‍ಟಾಫ್ ಮತ್ತು ಇತರ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.
ದಿ ಕಾಶ್ಮೀರ್ ವಾಲಾದ ಮುಖ್ಯ ಸಂಪಾದಕ ಫಹದ್ ಶಾ ಅವರನ್ನು ಫೆಬ್ರವರಿ 4 ಹಾಗೂ ಮಾರ್ಚ್ 16ರಂದು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಬಂಧಿಸಲಾಗಿದೆ.







