ಸರ್ಕಾರದಿಂದ ಆರೋಗ್ಯ ರಕ್ಷಣೆಗಾಗಿ ವಿಶೇಷ ಗಮನ: ಶಾಸಕ ಸಂಜೀವ ಮಠಂದೂರು
ತಾಲೂಕು ಮಟ್ಟದ ಆರೋಗ್ಯ ಮೇಳ

ಪುತ್ತೂರು: ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನ ಹರಿಸುತ್ತಿದ್ದು, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಸುರಕ್ಷಾ ಯೋಜನೆಗಳಂತಹ ಹಲವಾರು ಯೋಜನೆಗಳ ಮೂಲಕ ಜನರ ಆರೋಗ್ಯದ ರಕ್ಷಣೆ ಮಾಡಲಾಗುತ್ತಿದೆಅನೇಕ ಸಂಘ ಸಂಸ್ಥೇಗಳು ಕೂಡಾ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಸಾಥ್ ನೀಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ ಪುತ್ತೂರು, ಸಾರ್ವಜನಿಕ ಆಸ್ಪತ್ರೆ ಪುತ್ತೂರು, ಯೆನಪೋಯ ವೈದ್ಯಕೀಯ ಕಾಲೇಜು ಮಂಗಳೂರು ಹಾಗೂ ಸುದಾನ ವಿದ್ಯಾಸಂಸ್ಥೆ ಪುತ್ತೂರು ಇವುಗಲ ಸಹಯೋಗದಲ್ಲಿ ನೆಹರೂನಗರದಲ್ಲಿನ ಸುದಾನ ವಸತಿ ಶಾಲೆಯ ವಠಾರದಲ್ಲಿ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾವಣೆ ಆದಾಗ ಆರೋಗ್ಯದಲ್ಲೂ ಬದಲಾವಣೆ ಆಗುವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಕಾಪಾಡುವುದಕ್ಕಾಗಿ ಮತ್ತು ಎಲ್ಲರು ಆರೋಗ್ಯವಂತರಾಗಬೇಕು ಮತ್ತು ರೋಗ ಬಾರದ ಹಾಗೆ ಮುಂಜಾಗ್ರತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರ ಹಾಕಿಕೊಂಡಿದೆ. ಆದರೂ ಜನರಿಗೆ ಮಾಹಿತಿ ಕೊರತೆ ಇರುವುದನ್ನು ಗಮನಿಸಿ ಅವರಿಗೆ ಮಾಹಿತಿ ನೀಡುವ ಕಾರ್ಯವನ್ನೂ ಕೈಗೊಂಡಿದ್ದು, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬುದು ನಮ್ಮ ಸರಕಾರದ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಮೇಳಗಳು ತುಂಬಾ ಪ್ರಯೋಜನಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ನಗರಸಭಾ ವ್ಯಾಪ್ತಿಯಲ್ಲಿ ಆಯೋಜನೆ ಮಾಡಿದಲ್ಲಿ ನಗರಸಭೆಯ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ತಹಸೀಲ್ದಾರ್ ಟಿ. ರಮೇಶ್ ಬಾಬು, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ ವಿಜಯ ಹಾರ್ವಿನ್ ಮಾತನಾಡಿದರು. ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಹಾಗೂ ಪುತ್ತೂರು ನೊಡೆಲ್ ಅಧಿಕಾರಿ ಡಾ. ಬದ್ರುದ್ದೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟನೆಗೆ ಮೊದಲು ಮಂಜಲ್ಪಡ್ಡು ವೃತ್ತದಿಂದ ಸುದಾನ ಶಾಲೆಯ ತನಕ ಆರೋಗ್ಯ ಜಾಗೃತಿ ಜಾಥಾ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿದರು. ಸರ್ವೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ನಾಯಕ್ ವಂದಿಸಿದರು. ಆರೋಗ್ಯ ಮೇಳದಲ್ಲಿ ಕಾಯಿಲೆಗಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧಿ ವಿತರಣೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು, ಪ್ರಚಾರ ಹಾಗೂ ಆರೋಗ್ಯ ಮಾಹಿತಿ ಮತ್ತು ಶಿಕ್ಷಣ, ಅಗತ್ಯವಿರುವ ರೋಗಿಗಳಿಗೆ ಪ್ರಯೋಗಾಲಯ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿ ಕೊಡಲಾಯಿತು.