ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಹಗರಣ ಆರೋಪ; ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಿಎಫ್‌ಐ ಪ್ರತಿಭಟನೆ

ಮಂಗಳೂರು : ಶಾಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿತರಿಸುವ ಸಮವಸ್ತ್ರದಲ್ಲಿ ಕೋಟ್ಯಂತರ ರೂಪಾಯಿಯ ಹಗರಣ ಬೆಳಕಿಗೆ ಬಂದಿದೆ, ಇದು ಶಿಕ್ಷಣ ಸಚಿವರ ಕಮಿಷನ್ ದಂಧೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ನಿರಂತರ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಆರ್‌ಟಿಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ ೨೦೧೯ರ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ ಸರಕಾರವು ಹೊಲಿದ ಸಮವಸ್ತ್ರ ನೀಡಬೇಕೆಂದು ಹೇಳಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ ಸರಕಾರ ನೀಡಿದ್ದ ಟೆಂಡರ್ ಪ್ರಕಾರ ಕೇವಲ ೨೩೦ ರೂ ಗೆ ಹೊಲಿದ ಎರಡು ಜೊತೆ ಸಮವಸ್ತ್ರದ ಜೊತೆಗೆ ಶೂ, ಸೋಕ್ಸ್ ಹಾಗೂ ಟೈ ಕೂಡ ಎಸ್‌ಡಿಎಂಸಿ ಮುಖಾಂತರ ವಿತರಣೆ ಮಾಡಲಾಗಿತ್ತು. ಇದರಿಂದ ಸ್ಥಳೀಯರಿಗೆ ವ್ಯಾಪಾರವಾಗುತ್ತಿತ್ತು. ಆದರೆ ಇದೀಗ ಸರಕಾರವು ಎಸ್‌ಡಿಎಂಸಿಯನ್ನು ಕಡೆಗಣಿಸಿ ಕೇವಲ ಕಮಿಷನ್ ವ್ಯಾವೋಹದಿಂದ ಮಹಾರಾಷ್ಟ್ರ ಮೂಲದ ಕಂಪೆನಿಗೆ ಟೆಂಡರ್ ನೀಡಿ ೨೫೦ ರೂ.ಗಳಂತೆ ಹೊಲಿಯದ ಬಟ್ಟೆ ಯನ್ನು ನೀಡಲು ಮುಂದಾಗಿದೆ. ಈ ಮುಖಾಂತರ ಬಹು ಕೋಟಿಯ ಹಗರಣ ನಡೆದಿದೆ ಎಂದು ಅಂದಾಜಿ ಸಲಾಗಿದೆ. ಶಿಕ್ಷಣ ಸಚಿವರು ಕಮಿಷನ್ ದಂಧೆಗಾಗಿ ಉಚ್ಛ ನ್ಯಾಯಾಲಯದ ತೀರ್ಪನ್ನು ಪರಿಗಣಿಸದೆ ನ್ಯಾಯಾಲಯದ ನಿಂದನೆ ಮಾಡುತ್ತಿದ್ದಾರೆ ಎಂದು ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್ ಆರೋಪಿಸಿದರು.
ಈ ಸಂದರ್ಭ ಸಿಎಫ್‌ಐ ದ.ಕ ಜಿಲ್ಲಾಧ್ಯಕ್ಷ ತಾಜುದ್ದೀನ್, ಕಾರ್ಯದರ್ಶಿ ಸಂಶುದ್ದೀನ್, ಮಂಗಳೂರು ನಗರಾಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಕಾರ್ಯದರ್ಶಿ ಹಫೀಝ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಸರ್ಫ್ರಾಝ್, ಜಿಲ್ಲಾ ನಾಯಕಿಯರಾದ ಶಝ್ಮ, ಅಝ್ಶೀನ ಉಪಸ್ಥಿತರಿದ್ದರು.