ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ಹಗರಣ ಆರೋಪ; ಶಿಕ್ಷಣ ಸಚಿವರು ರಾಜಿನಾಮೆಗೆ ಆಗ್ರಹಿಸಿ ಸಿಎಫ್‌ಐ ಪ್ರತಿಭಟನೆ

ಉಡುಪಿ : ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿತರಿ ಸುವ ಸಮವಸ್ತ್ರದಲ್ಲಿ ನಡೆದ ಬಹುಕೋಟಿಯ ಹಗರಣದಲ್ಲಿ ಭಾಗಿಯಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡ ನವಾಝ್ ಶೇಖ್, ಶಿಕ್ಷಣ ಸಚಿವರು ಈ ಹಗರಣದ ಹಿಂದೆ ಕಮಿಷನ್ ದಂಧೆ ನಡೆಸುತ್ತಿದ್ದು ಹೈಕೋರ್ಟ್ ಆದೇಶವನ್ನು ಕೂಡ ಪರಿಗಣಿಸದೆ ನ್ಯಾಯಾಲಯದ ನಿಂದನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಕಮಿಷನ್ ದಂಧೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರು ಶೀಘ್ರ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಜಂಟಿ ಕಾರ್ಯದರ್ಶಿ ನಿದಾ ಮಾತ ನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಾದಿಕ್, ಜಿಲ್ಲಾ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.





