ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಐಪಿಸಿ ಕಲಂ 306ರಡಿ ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ಪತ್ರ

ಬೆಂಗಳೂರು, ಎ.18: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಹತ್ತು ವರ್ಷಗಳಿಗಿಂತ ಅಧಿಕ ವರ್ಷ ಶಿಕ್ಷೆ ನೀಡಬಹುದಾದ ಐಪಿಸಿ ಕಲಂ 306 ಹಾಗೂ ಇತರೆ ಕಲಂಗಳಡಿ ಎಫ್‍ಐಆರ್ ದಾಖಲಾಗಿ, ಐದು ದಿನಗಳು ಕಳೆದರೂ, ಮಾಜಿ ಸಚಿವ ಈಶ್ವರಪ್ಪ ಅವರನ್ನು ಬಂಧಿಸಿಲ್ಲ. ಜನಸಾಮಾನ್ಯರ ವಿರುದ್ಧ ಐಪಿಸಿ ಕಲಂ 306 ದಾಖಲಾಗಿದ್ದರೆ, ಬಂಧಿಸಿ ಶಿಕ್ಷೆ ನೀಡುತ್ತಿದ್ದರು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಅವರು ರಾಜ್ಯಪಾಲರಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ.
ವಕೀಲ ಜಗದೀಶ್ ಹಾಗೂ ನಟ ಚೇತನ್ ವಿರುದ್ಧ ಸಂಬಂಧವಿಲ್ಲದೆ, ಐಪಿಸಿ ಸೆಕ್ಷನ್ 307 ಅನ್ನು ದಾಖಲಿಸಿ ಬಂಧಿಸಿದ ಉದಾಹರಣೆಗಳಿವೆ. ಆದರೆ ಕೆಂಪುಕೋಟೆಯ ಮೇಲೆ ಕೇಸರಿಧ್ವಜವನ್ನು ಹಾರಿಸುತ್ತೇವೆ, ವಂದೇ ಮಾತರಾಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸುತ್ತೇವೆ ಎಂದು ಹೇಳಿದ ಈಶ್ವರಪ್ಪ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಯಾವ ಪ್ರಕರಣಗಳನ್ನು ದಾಖಲಿಸಲಿಲ್ಲ. ಈ ಕುರಿತು ಮೂರು ದಿನಗಳ ಸದನದ ಸಮಯವನ್ನೂ ವ್ಯರ್ಥ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಲಾಖೆಯ ಅಧಿಕಾರಿಗಳನ್ನು ಎಂಜಲು ಮತ್ತು ನಾಯಿ ಎಂದು ಅವಮಾನಿಸಿ ಮಾತನಾಡಿದ್ದಾರೆ ಎಂದು ಪತ್ರದ ಮೂಲಕ ಅವರು ಗಮನಕ್ಕೆ ತಂದಿದ್ದಾರೆ.
ಐಪಿಸಿ ಕಲಂ 306 ಅಡಿ ಪ್ರಕರಣ ದಾಖಲಾದರೆ ಬಂಧಿಸಿ ಶಿಕ್ಷಿಸಲೇಬೇಕು. ಆದರೆ, ಪೊಲೀಸರು ಪ್ರಭಾವಿ ರಾಜಕಾರಣಿಯಾದ ಈಶ್ವರಪ್ಪ ಅವರನ್ನು ಬಂಧಿಸುತ್ತಿಲ್ಲ. ಆದ್ದರಿಂದ ತಾವು ಸಂಬಂಧಪಟ್ಟವರಿಗೆ ಸೂಚನೆ ನೀಡಿ, ಈಶ್ವರಪ್ಪ ಅವರನ್ನು ಬಂಧಿಸಿ ಜನಸಾಮಾನ್ಯರಲ್ಲಿ ವಿಶ್ವಾಸ ತುಂಬಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.
ರಾಜಕೀಯ ವ್ಯಕ್ತಿಗಳ ಪ್ರಭಾವದಿಂದಾಗಿ ಪೋಕರಿಗಳ ನೈತಿಕ ಪೊಲೀಸ್‍ಗಿರಿ ಹೆಚ್ಚಾಗಿದೆ. ಹಿಜಾಬ್, ಹಲಾಲ್ ಕಟ್, ಜಟ್ಕಾಕಟ್, ಮುಸ್ಲಿಮರ ವ್ಯಾಪಾರ ಬಹಿಷ್ಕಾರ, ಕೋಮುದ್ವೇಷದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ಮತಾಂಧರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಹನುಮೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.







