ರಾಜ್ಯಕ್ಕೆ ಒಬ್ಬ ಶಕ್ತಿಯುತ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ, ಎ.18: ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಗಮನಿಸಿದರೆ ಒಬ್ಬ ಶಕ್ತಿಯುತ ಗೃಹ ಸಚಿವರ ಅಗತ್ಯವಿದೆ ಎನಿಸುತ್ತದೆ. ಈ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟನೆ ಹೊರಡಿಸುವುದು ಉತ್ತಮ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಪರಿಶೀಲಿಸುತ್ತೇನೆ, ಕ್ರಮಕೈಗೊಳ್ಳುತ್ತೇನೆ ಎಂದು ಗೃಹ ಸಚಿವರು ಸಾಫ್ಟ್ ಕಾರ್ನರ್ ಹೇಳಿಕೆ ನೀಡಿದರೆ ಪ್ರಯೋಜನವಿಲ್ಲ. ಮತೀಯ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ–ಧಾರವಾಡ, ವಿಜಯಪುರ, ಬಳ್ಳಾರಿ, ಬೀದರ್, ಕಲಬುರಗಿ, ಶಿವಮೊಗ್ಗ, ರಾಯಚೂರಿನಂತ ಸೂಕ್ಷ್ಮ ಪ್ರದೇಶಗಳಲ್ಲಿ ಮತೀಯ ಶಕ್ತಿಗಳು ಬಲಿಷ್ಠವಾಗಿವೆ. ಈ ಬಗ್ಗೆ ಗುಪ್ತಚರ ಇಲಾಖೆ ಬಳಿಯೂ ಮಾಹಿತಿ ಇದೆ. ಮತೀಯ ಶಕ್ತಿಗಳು ತಮ್ಮ ಮನೆ, ಅಂಗಡಿಗಳಲ್ಲಿ ಬಚ್ಚಿಟ್ಟಿರುವ ಗನ್, ತಲವಾರ್, ಕಲ್ಲು ಸೇರಿದಂತೆ ಮಾರಕಾಸ್ತ್ರಗಳನ್ನು ಶೋಧಿಸಿ, ವಶಕ್ಕೆ ಪಡೆಯಲು ಗೃಹ ಇಲಾಖೆ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.
ಘಟನೆ ಹಿಂದೆ ಕಾಂಗ್ರೆಸ್‍ನವರ ಕುಮ್ಮಕ್ಕಿದೆ, ಅವರ ಕುಮ್ಮಕ್ಕಿದೆ, ಇವರ ಕುಮ್ಮಕ್ಕಿದೆ ಎಂಬ ಹೇಳಿಕೆ ನೀಡುವುದನ್ನು ಬಿಡಿ, ಜನ ಈ ಕಥೆ ಕೇಳುವುದಿಲ್ಲ. ಅಧಿಕಾರ ಬಿಜೆಪಿಗೆ ಕೊಟ್ಟಿದ್ದೇವೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ ಎಂದರು.
ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ: ರಾಜ್ಯ ಸಚಿವ ಸಂಪುಟ ಶೀಘ್ರ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ ಎಂದು ಯತ್ನಾಳ್ ಹೇಳಿದರು.







