ಬೆಂಗಳೂರಿನಲ್ಲಿ ಸತತ ನಾಲ್ಕು ದಿನದಿಂದ ಗುಡುಗು ಸಹಿತ ಮಳೆ

ಬೆಂಗಳೂರು, ಎ.18: ಬೇಸಿಗೆಯಲ್ಲೂ ನಗರದಲ್ಲಿ ಸತತ ನಾಲ್ಕು ದಿನದಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಿಲ್ಸನ್ ಗಾರ್ಡನ್, ಕೆ.ಆರ್. ಮಾರ್ಕೆಟ್, ರಾಜಾಜಿನಗರ, ಲಾಲ್ ಬಾಗ್, ಎಂ.ಜಿ ರಸ್ತೆ ಸೇರಿದಂತೆ ದ್ವಿಚಕ್ರ ವಾಹನ ಸವಾರರು ಹೈರಾಣಾಗಿದ್ದರು. ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸಿ ಮಳೆ ಬೀಳದ ಕಡೆ ನಿಂತಿದ್ದರು. ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.
ಮಳೆಯಿಂದಾಗಿ ರಸ್ತೆಗಳು ಜಾಲಾವೃತಗೊಂಡಿದ್ದು, ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಪರದಾಡಿದರು. ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಿಜಯನಗರ, ಅಭಿನಯ ಚಿತ್ರಮಂದಿರ ರಸ್ತೆ, ಕೆಂಗೇರಿ, ಚಾಮರಾಜಪೇಟೆ ಸೇರಿದಂತೆ ಹಲವು ಕಡೆ ಮರಗಳು ಮಳೆಗೆ ಧರೆಗೆ ಉರುಳಿದೆ.
ನಾಲ್ಕೇ ದಿನದಲ್ಲಿ ಒಟ್ಟು 200ಕ್ಕೂ ಮನೆಗಳಿಗೆ ಹಾನಿಯಾಗಿದೆ. ನಗರದ ಕಾಮಾಕ್ಯ ಥಿಯೇಟರ್ ಬಳಿ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ರಸ್ತೆಯಲ್ಲೂ ಮಳೆ ನೀರು ಜನರ ನೆಮ್ಮದಿ ಕೆಡಿಸಿತ್ತು. ಹಾಗಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಗರದ ಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿಕೊಂಡಿದೆ.
ನಗರದ 44 ಸಂಚಾರಿ ಠಾಣಾ ವ್ಯಾಪ್ತಿಯ ಅನ್ವಯ ನೀರು ನಿಲ್ಲುವ ರಸ್ತೆಯನ್ನು ಬಿಬಿಎಂಪಿ ಗೊತ್ತು ಮಾಡಿಕೊಂಡಿದ್ದು, ಬಾಣಸವಾಡಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ 22 ಸೂಕ್ಷ್ಮ ಪ್ರದೇಶಗಳಿವೆ. ಅಶೋಕನಗರ, ಆರ್.ಟಿ ನಗರ, ಹೆಬ್ಬಾಳ, ಜಿ.ಬಿ ನಗರಗಳಲ್ಲಿ ತಲಾ 11 ಸೂಕ್ಷ್ಮ ಪ್ರದೇಶಗಳನ್ನು ಪಾಲಿಕೆ ಗುರುತಿಸಲಾಗಿದೆ. ಕೆಆರ್ ಪುರಂ, ಕೆಂಗೇರಿ, ವ್ಯಾಪ್ತಿಯಲ್ಲಿ ತಲಾ 4, ಹಲಸೂರು ವ್ಯಾಪ್ತಿಯಲ್ಲಿ 8 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವುದಾಗಿ ಪಾಲಿಕೆ ತಿಳಿಸಿದೆ.











