ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನೀರಾವರಿ ಯೋಜನೆಗೆ 5 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು: ಕುಮಾರಸ್ವಾಮಿ

ಕಳಸ, ಎ.18: ರಾಜ್ಯದಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಜಲಧಾರೆಯ ಯೋಜನೆ ಮೂಲಕ 5ಲಕ್ಷ ಕೋಟಿ ಹಣ ನೀರಾವರಿ ಯೋಜನೆಗೆ ಮೀಸಲಿಡಲಾಗುವುದು. ಐದು ವರ್ಷಗಳಲ್ಲಿ ಇಷ್ಟು ಹಣವನ್ನು ಹೊಂದಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇನೆ. ಆದರೆ ಇದರಲ್ಲಿ ದುಡ್ಡು ಹೊಡೆಯುವ ಕೆಲಸ ನಾವು ಮಾಡುವುದಿಲ್ಲ.ಯಾರಾದರೂ ಒಬ್ಬ ಮಂತ್ರಿ ಈ ಹಣದಲ್ಲಿ ಪರ್ಸಂಟೇಜ್ ತೆಗೆದುಕೊಂಡರೆ ಅಂತವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕುವಂತಹ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರ್ಸೆಂಟೇಜ್ ಕೆಲಸವನ್ನು ನಾವು ಮಾಡುವುದಿಲ್ಲ. ನಮಗೆ ಬೇಕಾಗಿದ್ದು ಹಣವಲ್ಲ, ಬದಲಾಗಿ ಬದುಕಿನ ಮೂರು ದಿನದ ಆಟದಲ್ಲಿ ಶಾಶ್ವತವಾಗಿ ಜನರ ಪ್ರೀತಿಯನ್ನು ಉಳಿಸಿಕೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. ಈ ನೀರಾವರಿ ಹೋರಾಟ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುವುದಾಗಿದೆಯೇ ಹೊರತು ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸಕ್ಕೆ ಅಲ್ಲ.ಸದ್ಯ ಸಮಾಜದ ಜನರ ಮಧ್ಯೆ ಸಂಘರ್ಷ ಹುಟ್ಟು ಹಾಕಿ ಬಡವರ ಬದುಕನ್ನು ರಾಜ್ಯ ಸರಕಾರ ಕಿತ್ತುಕೊಳ್ಳುತ್ತಿದೆ. ಇಂತವರ ಜೊತೆ ಸೇರಿ ನಾನು ಮುಂದೆಂದೂ ಸರಕಾರ ಮಾಡಲ್ಲ ಎಂದರು.
ನೀರನ್ನು ಬಳಕೆ ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ಈ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ 43 ಉಪ ನದಿಗಳಿದ್ದು, ಆ ನದಿಗಳ ನೀರನ್ನು ರೈತರಿಗೆ ಮತ್ತು ಪ್ರತೀ ಮನೆಗಳಿಗೆ ಕುಡಿಯುವ ನೀರನ್ನು ಕೊಡುವ ಉದ್ದೇಶವೇ ಈ ಜನತಾ ಜಲಧಾರೆ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಸ್ತೆಗಳು,ಸೇತುವೆಗಳು,ಕುಡಿಯುವ ನೀರು ಯೋಜನೆಗಳು ಪ್ರಾರಂಭವಾಗಿದ್ದು ಜನತಾದಳ ಪಕ್ಷ ಎಂಟು ವರ್ಷ ಆಡಳಿತ ಮಾಡಿದ ಸಂದರ್ಭದಲ್ಲಿ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯನ್ನು ಕಂಡಿದ್ದೆ ಅಂದಿನಿಂದ ಎಂದರು.
ಕಾಂಗ್ರೆಸಿನ ಡಿಪಿಆರ್ ನಲ್ಲಿ ಕಳಸ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಳಸ ಮಳುಗಡೆಯಾಗುವುದನ್ನು ಉಳಿಸಿಕೊಟ್ಟಿರುವುದು ನಾವು. ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿರುವುದು ನಾವು, ಇನಾಂ ಭೂಮಿಯಿಂದ ರೈತರನ್ನು ಉಳಿಸಿದ್ದು ನಾವು. ಊರಿಗೆ ಬಂದಾಗ ಪ್ರೀತಿಯಿಂದ ಮನೆ ಮಗನಂತೆ ನೋಡಿಕೊಂಡು ಪ್ರೀತಿ ತೋರಿಸ್ತೀರಿ, ಆದರೆ ಓಟು ಮಾತ್ರ ಕೊಡಲ್ಲ, ಇದು ನನ್ನ ದೌರ್ಭಾಗ್ಯ ಅಲ್ಲ, ನಾಡಿನ ಜನತೆಯ ದೌರ್ಭಾಗ್ಯ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನ ಪರಿಷತ್ತು ಸದಸ್ಯ ಭೋಜೇಗೌಡ ಮಾತನಾಡಿ, ಚುನಾವಣೆಯ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಧರ್ಮ,ದೇವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಈ ನಾಡಿನ ಬಡವರ,ದೀನದಲಿತರ ಉದ್ಧಾರಕ್ಕಾಗಿ ರಾಜಕೀಯ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಕಾರ್ಯಕರ್ತರು ನಂತರ ಭದ್ರಾನದಿಹಗೆ ತೆರಳಿ ಜಲಸಂಗ್ರಹಣೆ ಮಾಡಿದರು. ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಜಿತ್ ರಂಜನ್,ಕಳಸ ತಾಲೂಕು ಅಧ್ಯಕ್ಷ ಎಂ.ಬಿ.ಸಂತೋಷ್ ಹಿನಾರಿ,ಕಾರ್ಯದರ್ಶಿ ಬ್ರಹ್ಮ ದೇವ,ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ,ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ,ಯೂತ್ ಜನತಾದಳ ಅಧ್ಯಕ್ಷ ಸುಜಿತ್,ಕಾರ್ಯದರ್ಶಿ ಅರುಣ್ ಕುಮಾರ್ ಮುಖಂಡರಾದ ಸುದಾಕರ ಶೆಟ್ಟಿ,ವೆಂಕಟೇಶ್,ಚಂದ್ರಪ್ಪ,ಸುರೇಶ್‍ಗೌಡ ಇತರರು ಇದ್ದರು.







