ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು: ಸಚಿವ ಸಂಪುಟ ಸಭೆ ತೀರ್ಮಾನ

ಬೆಂಗಳೂರು, ಎ.18: ಠೇವಣಿದಾರರ ಮೇಲಿನ ಪ್ರಕರಣಗಳ ಕಾಯ್ದೆ ತಿದ್ದುಪಡಿ, 136 ಕೋಟಿ ಅನುದಾನದಡಿ ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯವನ್ನು ತಿಳಿಸಿದರು.
ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‍ಗೆ 25 ಕೋಟಿ ಮಂಜೂರು, 2 ಲಕ್ಷ ಮನೆಗಳ ನಿರ್ಮಾಣಕ್ಕೆ ಇದ್ದ ಅಡೆತಡೆ ತೆರವು, ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ. ದಾವಣಗೆರೆ ಹರಿಹರ ರೈಲ್ವೇ ಮೇಲ್ಸೇತುವೆಗೆ 36.30 ಕೋಟಿ ಹಾಗೂ ದತ್ತಾಂಶ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ. ಹಾವೇರಿ ಜಿಲ್ಲೆ ಕೆರೆ ತುಂಬಲು 105 ಕೋಟಿ ಮಂಜೂರು, ಸೋನಿ ವರ್ಲ್ಡ್ ಬಳಿ ಎಲಿವೇಟೆಡ್ ಕಾರಿಡಾರ್ ಮರು ಟೆಂಡರ್ ಪ್ರಕ್ರಿಯೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇಂದಿರಾ ಕ್ಯಾಂಟಿನ್‍ಗಳ ಸ್ಥಳಾಂತರಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಸಮೀಕ್ಷೆ ವರದಿಯನ್ನು ಕೇಳಲಾಗಿದೆ ಎಂದ ಅವರು, ಕಬ್ಬಿಣದ ಅದಿರು ರಫ್ತು ವಿಚಾರ ಚರ್ಚಿಸಿದ್ದು, ರಫ್ತು ರದ್ದು ನೀತಿಯನ್ನು ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಬ್ಬಿಣದ ಅದಿರು ರಫ್ತು ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ನಾಳೆ ವಿಚಾರಣೆ ಇದೆ. ರಫ್ತು ಮಾಡುವ ಕುರಿತು ಕೋರ್ಟ್ ಸರಕಾರದ ನಿಲುವನ್ನು ಕೇಳಿತ್ತು. ಈ ಸಂಬಂಧ ಈಗಾಗಲೇ ಅಫಿಡೆವಿಟ್ ಸಲ್ಲಿಸಿದೆ. ಜತೆಗೆ 2021ರಲ್ಲಿ ಸರಕಾರ ತೆಗೆದುಕೊಂಡಿರುವ ಗಣಿ ನೀತಿ ಮುಂದುವರಿಸಿಕೊಂಡು ಹೋಗುವ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಅಲ್ಲದೆ, ಕಬ್ಬಿಣದ ಅದಿರು ರಫ್ತು ಮಾಡಬಹುದು ಎಂದು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ರಾಜ್ಯದಲ್ಲಿ ಈ ಹಿಂದಿನ ಘಟನಾವಳಿಗಳು, ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಅದಿರು ರಫ್ತು ರದ್ದು ನೀತಿಯನ್ನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಮಾಧುಸ್ವಾಮಿ ವಿವರಿಸಿದರು.