ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪರಿಹರಿಸಬೇಕೆಂಬುದೇ ನನ್ನ ಆಸೆ: ಎಚ್.ಡಿ. ದೇವೇಗೌಡ

ಚಿಕ್ಕಬಳ್ಳಾಪುರ: ಇಳಿವಯಸ್ಸಿನಲ್ಲಿ ನಾನು ಅಧಿಕಾರ ಅನುಭವಿಸಬೇಕೆಂಬ ಆಸೆಯಿಲ್ಲ. ಆದರೆ ಸಾಯುವ ಮುನ್ನ ಜೆಡಿಎಸ್ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ತರಬೇಕು. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಿ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪೂರ್ಣವಿರಾಮ ನೀಡಬೇಕೆಂಬುದೇ ನನ್ನ ಆಸೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಸೋಮವಾರ ಜೆಡಿಎಸ್‍ನಿಂದ ಏರ್ಪಡಿಸಿದ್ದ ಜನತಾ ಜಲಧಾರೆ ರಥೋತ್ಸವದಲ್ಲಿ ಮಾತನಾಡಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಹೈನುಗಾರಿಕೆ, ರೇಷ್ಮೆಯನ್ನು ನಂಬಿ ಬದುಕು ಕಟ್ಟಿಕೊಂಡವರು. ಬಾವಿಯಲ್ಲಿ ಬೇಕಾದಷ್ಟು ನೀರು ಬರುವ ಕಾಲವಿತ್ತು. ಅಂತಹ ಸಂಪದ್ಭರಿತ ಕಾಲ ಮುಂದೆ ಬರುವುದೋ ಇಲ್ಲವೋ ಕಾಣೆ, ಈಗ ಅಂಜರ್ಜಲವನ್ನು ನಂಬಿ ಬದುಕುತ್ತಿದ್ದಾರೆ. ನೀರಿದ್ದವರ ಬದುಕಿನ ಮುಂದೆ ನೀರಿಲ್ಲದವರ ಬದುಕು ದುಸ್ತರವಾಗಿ ಕಾಣುತ್ತಿದೆ. ಇದನ್ನು ಹೋಗಲಾಡಿಸಲು ನದಿ ನೀರಿನ ಆಸರೆ ಬೇಕಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಗಳಲ್ಲಿ ಬೇಕಾದಷ್ಟು ಜಲಮೂಲವಿದೆ. ಆದರೆ ಅದನ್ನು ಬಳಸಿಕೊಳ್ಳುವ ಇಚ್ಚಾಶಕ್ತಿ ನಮ್ಮ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಕಾವೇರಿ, ಕೃಷ್ಣಾ, ಮಹದಾಯಿ ನೀರು ಅಂತರರಾಜ್ಯ ವ್ಯಾಜ್ಯವಾಗಿ ಪರಿವರ್ತನೆ ಆಗಿದೆ. ನಮ್ಮ ನೀರಿನ ಬಳಕೆಗೆ ಇತರೆರಾಜ್ಯಗಳ ಅನುಮತಿ ಪಡೆಯಬೇಕಿದೆ. ಇದನ್ನು ಬಳಸಿಕೊಳ್ಳಲು ಪ್ರತಿ ರಾಜ್ಯದಲ್ಲೂ ವಿರೋಧ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನೀರಾವರಿ ವಿಚಾರಗಳ ಬಗ್ಗೆ ಸಾಕಷ್ಟು ಭಾಷಣ ಮಾಡಬಹುದು. ಆದರೆ ನಮ್ಮ ಜನರು ಇದನ್ನು ಎದುರಿಸುವ ಸಾಮರ್ಥ್ಯ ಬರಬೇಕಾಗಿದೆ. ಕತ್ತಿಗುರಾಣಿ ಹಿಡಿದು ಹೊಡೆದಾಡುವುದಲ್ಲ. ರಾಜಕೀಯ ಶಕ್ತಿಯ ಮೂಲಕವೇ ಇದನ್ನು ಬಗೆ ಹರಿಸಲು ಸಾಧ್ಯ. ಲೋಕಸಭೆಯಲ್ಲಿ ತಮಿಳುನಾಡಿನ 40 ಮದಿ ಎಂಪಿಗಳಿದ್ದಾರೆ. ಪ್ರತಿ ಪ್ರಧಾನಿ ಬಳಿ ಅವರು ಹೋಗಿ ತಮಗೆ ಬೇಕಾದ ಹಾಗೆ ಕಾವೇರಿ ನದಿ ನೀರನ್ನು ಬಳಸಿಕೊಳ್ಳುತ್ತಾರೆ. ನೀರಾವರಿ ಯೋಜನೆಗಳ ವಿಚಾರದಲ್ಲಿ ತಮಿಳು ನಾಡಿನಂತೆ ಜೆಡಿಎಸ್‍ಗೆ ಶಕ್ತಿ ತುಂಬಬೇಕಿದೆ ಎಂದು ನುಡಿದರು.
ಕಾವೇರಿ ವಿಚಾರದಲ್ಲಿ ಮನಮೋಹನ್‍ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದ ರಾಜ್ಯದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ ಇವರನ್ನು ನನ್ನ ಬೆಂಬಲಕ್ಕೆ ನಿಲ್ಲಬೇಕೆಂದು ಕೇಳಿಕೊಂಡಾಗ ಯಾರೊಬ್ಬರೂ ಪಕ್ಷದ ಆದೇಶ ಮೀರಿ ನನಗೆ ಬೆಂಬಲಿಸಲಿಲ್ಲ. ಈಗಿರುವ ಬಿಜೆಪಿಯ 27 ಮಂದಿಯೂ ಕೂಡ ಹಿತಕಾಯುತ್ತಿಲ್ಲ. ರಾಜ್ಯದ ಹಿತಕಾಯುವುದು ಜೆಡಿಎಸ್‍ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಶರವಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್ ಇದ್ದರು.







