ಛತ್ತೀಸ್ಗಡ: ಮಾವೋವಾದಿಗಳಿಂದ ವ್ಯಕ್ತಿಯ ಹತ್ಯೆ, ಭದ್ರತಾ ಪಡೆ ಶಿಬಿರದ ಮೇಲೆ ದಾಳಿ
ರಾಯಪುರ,ಎ.18: ಪ್ರತ್ಯೇಕ ಘಟನೆಗಳಲ್ಲಿ ಸೋಮವಾರ ನಸುಕಿನಲ್ಲಿ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಕೊಲಾಯಿಗುಡಾದಲ್ಲಿ 30ರ ಹರೆಯದ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಮಾವೋವಾದಿಗಳು, ರವಿವಾರ ರಾತ್ರಿ ಬಿಜಾಪುರದಲ್ಲಿ ಭದ್ರತಾ ಪಡೆಯ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಅದೇ ದಿನ ಬಿಜಾಪುರ-ದಾಂತೆವಾಡಾ ಗಡಿಗೆ ಸಮೀಪದ ಗ್ರಾಮದಲ್ಲಿ ಹಲವಾರು ವಾಹನಗಳನ್ನೂ ಸುಟ್ಟು ಹಾಕಿದ್ದಾರೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಕೆಲವು ವರ್ಷಗಳ ಹಿಂದೆ ಛತ್ತೀಸ್‌ಗಡದಲ್ಲಿನ ತನ್ನ ಗ್ರಾಮದಿಂದ ಪರಾರಿಯಾಗಿದ್ದ ತೆಲಂಗಾಣ ನಿವಾಸು ದುಧಿ ಗಂಗಾ ಎಂದು ಗುರುತಿಸಲಾಗಿದ್ದು, ಸಮಾರಂಭವೊಂದರಲ್ಲಿ ತನ್ನ ಸಂಬಂಧಿಗಳನ್ನು ಭೇಟಿಯಾಗಲು ಆತ ಗ್ರಾಮಕ್ಕೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ತಡರಾತ್ರಿ ಬಿಜಾಪುರದಲ್ಲಿ ಭದ್ರತಾ ಪಡೆಯ ಶಿಬಿರದ ಮೇಲೆ ಗ್ರೆನೇಡ್ ದಾಳಿ ನಡೆಸಿದ ಮಾವೋವಾದಿಗಳು ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಪರಾರಿಯಾಗಿದ್ದಾರೆ. ನಾಲ್ವರು ಪೊಲೀಸರು ಗಾಯಗೊಂಡಿದ್ದು,ಈ ಪೈಕಿ ಇಬ್ಬರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರನೇ ಘಟನೆಯಲ್ಲಿ ಮಂಗ್ನಾರ್ ಗ್ರಾಮದಲ್ಲಿ 100 ಮಾವೋವಾದಿಗಳ ಗುಂಪೊಂದು ಮಂಗ್ನಾರ್ ಮತ್ತು ಸಾತ್ಧಾರ್ ನಡುವೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಮತ್ತು ಜಿಲ್ಲಾಡಳಿತದಿಂದ ದೂರವಿರುವಂತೆ ಗುತ್ತಿಗೆದಾರನಿಗೆ ಮತ್ತು ಗ್ರಾಮದ ಹಿರಿಯರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.







