ಶ್ರೀ ಉಲ್ಕಾ ಮೀನು ಕಾರ್ಖಾನೆ ದುರಂತಕ್ಕೆ ಕಂಪೆನಿಯೇ ಹೊಣೆ: ಎಸ್‌ಡಿಪಿಐ
ಮಂಗಳೂರು : ಎಸ್‌ಇಝೆಡ್‌ನ ಶ್ರೀ ಉಲ್ಕಾ ಮೀನು ಕಾರ್ಖಾನೆಯಲ್ಲಿ ರವಿವಾರ ರಾತ್ರಿ ನಡೆದ ದುರಂತಕ್ಕೆ ಕಂಪೆನಿಯೇ ಹೊಣೆ ಎಂದು ಆಪಾದಿಸಿರುವ ಎಸ್‌ಡಿಪಿಐ ದ.ಕ.ಜಿಲ್ಲಾ ಘಟಕವು ಮೃತ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಕಾರ್ಖಾನೆ ಕಾಯ್ದೆ ಪ್ರಕಾರ ಸಂಜೆ ೬ರ ಬಳಿಕ ಡ್ರೈನೇಜ್‌ಗೆ ಇಳಿಸುವಂತಿಲ್ಲ. ಕಂಪೆನಿಯಲ್ಲಿ ಯಾವುದೇ ಸುರಕ್ಷತಾ ಸಾಧನಗಳು ಇರಲಿಲ್ಲ. ಆಕ್ಸಿಜನ್ ಮಾಸ್ಕ್, ಮೇಲಕ್ಕೆತ್ತಲು ಹಗ್ಗ, ಹುಕ್ ಬೆಲ್ಟ್, ಗ್ಲೌಸ್‌ಗಳನ್ನು ನೀಡಿರಲಿಲ್ಲ. ಕನಿಷ್ಠ ಪಕ್ಷ ಆ್ಯಂಬುಲೆನ್ಸ್ ಸೇವೆಯೂ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಕಂಪೆನಿಯ ನಿರ್ಲಕ್ಷ್ಯಕ್ಕೆ ಐದು ಜೀವಗಳು ಬಲಿಯಾಗಿವೆ. ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದೆ. ಸುಮಾರು 12 ಗಂಟೆ ಕೆಲಸ ಮಾಡಿಸಿ ಕೇವಲ 300-400 ರೂ. ವೇತನ ನೀಡಲಾಗುತ್ತದೆ. ಇಫ್ತಾರ್ ಸಮಯದಲ್ಲೂ ಯಾವುದೇ ವಿನಾಯಿತಿ ನೀಡುತ್ತಿರಲಿಲ್ಲ. ಕಾರ್ಮಿಕರನ್ನು ಶೋಷಿಸುವ ಇಂತಹ ಕಾರ್ಖಾನೆಗೆ ಲೈಸೆನ್ಸ್ ನೀಡಿದ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮಾತನಾಡಿ ಪರಿಶೀಲನೆ ನಡೆಸದೆ ಲೈಸೆನ್ಸ್ ನೀಡಿದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಮಾಲಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ದುರಂತದ ಹೊಣೆಯನ್ನು ಕಂಪೆನಿ ಮತ್ತು ಜಿಲ್ಲಾಡಳಿತ ಹೊರಬೇಕು. ಮೃತ ಕಾರ್ಮಿಕರ ಕುಟುಂಬಿಕರಿಗೆ ಕಂಪೆನಿ ಮತ್ತು ಸರಕಾರದಿಂದ ಪ್ರತ್ಯೇಕವಾಗಿ ತಲಾ ೨೫ ಲಕ್ಷ ರೂ. ಪರಿಹಾರ ನೀಡಬೇಕು. ಐಸಿಯು ನಲ್ಲಿರುವ ರೋಗಿಗಳಿಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಆಸಿಫ್ ಕೋಟೆಬಾಗಿಲು, ಶರೀಫ್ ಪಾಂಡೇಶ್ವರ, ಇಸ್ಮಾಯಿಲ್ ಇಂಜಿನಿಯರ್, ಪ್ರತ್ಯಕ್ಷದರ್ಶಿ ಕಾರ್ಮಿಕ ಹಸನ್ ಮುಂಡೋಲ್, ಮೃತರ ಕುಟುಂಬಸ್ಥರಾದ ಹಿದಾಯತುಲ್ಲ, ನೂರುಲ್ ಝಮಾನ್ ಉಪಸ್ಥಿತರಿದ್ದರು.