ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ ಜತೆಯಾದ ಸಿರಿಯಾ ಹೋರಾಟಗಾರರು

ಸಾಂದರ್ಭಿಕ ಚಿತ್ರ | PTI
ಬೆರೂತ್, ಎ.18: ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಯುದ್ಧದ ಮುಂದಿನ ಹಂತದಲ್ಲಿ ರಶ್ಯದ ಪರ ಹೋರಾಡಲು ಸಿರಿಯಾದ ಹೋರಾಟಗಾರರು ಸನ್ನದ್ಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಶ್ಯದಲ್ಲಿ ತರಬೇತಿ ಪಡೆದಿರುವ ಸಿರಿಯಾದ ಸಾವಿರಾರು ಹೋರಾಟಗಾರರು ಇದೀಗ ಉಕ್ರೇನ್ ನಲ್ಲಿ ರಶ್ಯ ಸೇನೆಯ ಜತೆ ಕೈಜೋಡಿಸಲಿದ್ದಾರೆ. ಇವರಲ್ಲಿ ಸಿರಿಯಾದ ಸೈನಿಕರು, ಈ ಹಿಂದೆ ಬಂಡುಗೋರರ ಸಂಘಟನೆಯಲ್ಲಿದ್ದವರು, ಸಿರಿಯಾದ ಮರುಭೂಮಿಯಲ್ಲಿ ಹಲವು ವರ್ಷ ಐಸಿಸ್ ಉಗ್ರರ ಜತೆ ಹೋರಾಡಿದ ಅನುಭವಿ ಹೋರಾಟಗಾರರಿದ್ದಾರೆ. ಅಲ್ಲದೆ ಸಿರಿಯಾದ ಪ್ರಮುಖ ಸೇನಾ ಮುಖಂಡ ಬ್ರಿಗೇಡಿಯರ್ ಜನರಲ್ ಸುಹೈಲ್ ಅಲ್-ಹಸನ್ ಅವರ ತುಕಡಿಯೂ ರಶ್ಯ ಪರ ಹೋರಾಡಲು ಮುಂದೆ ಬಂದಿದ್ದಾರೆ.
ಈ ಹೋರಾಟಗಾರರನ್ನು ಯುದ್ಧರಂಗದ ಮುಂಚೂಣಿ ನೆಲೆಯಲ್ಲಿ ನಿಯೋಜಿಸುವ ಮುನ್ನ ರಶ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯದ ಪರ ಹೋರಾಡಲು ಇದುವರೆಗೆ ಮಧ್ಯಪ್ರಾಚ್ಯ ವಲಯದಿಂದಲೇ 16,000ಕ್ಕೂ ಅಧಿಕ ಹೋರಾಟಗಾರರು ಮುಂದೆ ಬಂದಿದ್ದಾರೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಉಕ್ರೇನ್ ಭಾಗದಲ್ಲಿ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿರುವ ರಶ್ಯ, ಸಿರಿಯಾದ ಹೋರಾಟಗಾರರನ್ನು ಈ ವಲಯದಲ್ಲಿ ನಿಯೋಜಿಸಬಹುದು. ಈ ಹಿನ್ನೆಲೆಯಲ್ಲಿಯೇ ರಶ್ಯವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ತನ್ನ ಸೇನೆಗೆ ಜನರಲ್ ಅಲೆಕ್ಸಾಂಡರ್ ಡೊರ್ನಿಕೋವ್ ರನ್ನು ಹೊಸ ಕಮಾಂಡರ್ ಆಗಿ ನೇಮಕಮಾಡಿದೆ. ಸಿರಿಯಾ ಸೇನೆಯ ಪರ ಹೋರಾಟದಲ್ಲಿ ಭಾಗವಹಿಸಿದ್ದ ವಿದೇಶಿ ಸೇನಾ ತುಕಡಿಯನ್ನು ಮುನ್ನಡೆಸಿದ್ದ ಡೊರ್ನಿಕೋವ್, ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಅನುಭವ ಹೊಂದಿದವರು. ಆದ್ದರಿಂದ ಸಿರಿಯಾ ಹೋರಾಟಗಾರರೊಂದಿಗೆ ಉತ್ತಮ ಸಂವಹನ ಸಾಧ್ಯವಾಗಲಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಉಕ್ರೇನ್ ಸೇನಾ ನೆಲೆಯ ಮೇಲೆ ಸಾಮೂಹಿಕ ದಾಳಿ : ರಶ್ಯ
ಉಕ್ರೇನ್ ನ ಮಿಲಿಟರಿ ನೆಲೆ ಹಾಗೂ ಸಂಬಂಧಿಸಿದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ವಾಯುಪಡೆ, ಕ್ಷಿಪಣಿ ಪಡೆ, ಫಿರಂಗಿ ದಳ ಮತ್ತು ವಾಯುರಕ್ಷಣಾ ವ್ಯವಸ್ಥೆಯನ್ನು ಬಳಸಿ ರವಿವಾರ ರಾತ್ರಿಯಿಡೀ ಸಾಮೂಹಿಕ ವಾಯುದಾಳಿ ನಡೆಸಿರುವುದಾಗಿ ರಶ್ಯ ಸೋಮವಾರ ಹೇಳಿದೆ.
ಖಾರ್ಕಿವ್, ಝಪೊರಿಝಿಯ, ಡೊನೆಟ್ಸ್ಕ್ ಮತ್ತು ನಿಪ್ರೊಪೆಟ್ರೊವ್ಸ್ಕ್ ವಲಯ ಹಾಗೂ ಮಿಕೊಲಯಿವ್ ಬಂದರಿನಲ್ಲಿ ದಾಳಿ ನಡೆದಿದೆ ಮತ್ತು ಉಕ್ರೇನ್ ಸೇನೆ ಮತ್ತು ಶಸ್ತ್ರಾಸ್ತ್ರಗಳ 315 ನೆಲೆಯನ್ನು ಗುರುತಿಸಿ 108 ಪ್ರದೇಶಗಳಲ್ಲಿ ರವಿವಾರ ರಾತ್ರಿ ವಾಯುಪಡೆ ದಾಳಿ ನಡೆಸಿದೆ. ವಾಯುದಾಳಿಯಲ್ಲಿ ಉಕ್ರೇನ್ ನ 5 ಕಮಾಂಡ್ ನೆಲೆ, ಒಂದು ಇಂಧನ ಸಂಗ್ರಹಾಗಾರ, 3 ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರ ಸಹಿತ 16 ಸೇನಾ ವ್ಯವಸ್ಥೆಗೆ ಹಾನಿಯಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
ಉತ್ತರ ಪ್ರಾಂತದಲ್ಲಿ ಉಕ್ರೇನ್ ಸೇನೆಯಿಂದ ಎದುರಾದ ಭಾರೀ ಪ್ರತಿರೋಧದ ಹಿನ್ನೆಲೆಯಲ್ಲಿ ಪೂರ್ವದ ಡೊನ್ಬಾಸ್ ಪ್ರಾಂತದತ್ತ ತನ್ನ ಮುಂಚೂಣಿ ಪಡೆಯನ್ನು ಸ್ಥಳಾಂತರಿಸಿರುವ ರಶ್ಯ, ಅಲ್ಲಿಂದ ದೀರ್ಘವ್ಯಾಪ್ತಿಯ ಕ್ಷಿಪಣಿ ಮೂಲಕ ಕೀವ್ ಮೇಲೆ ಆಕ್ರಮಣ ಮುಂದುವರಿಸಿದೆ. ಅಲ್ಲದೆ, ಕೆಲದಿನಗಳಿಂದ ಮುತ್ತಿಗೆಗೆ ಒಳಗಾಗಿದ್ದ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ನ ಮೇಲೆ ಈಗ ಸಂಪೂರ್ಣ ನಿಯಂತ್ರಣ ಸಾಧಿಸಲಾಗಿದೆ ಎಂದು ರಶ್ಯ ಸೇನೆ ಹೇಳಿದೆ. ಆದರೆ ಇದನ್ನು ನಿರಾಕರಿಸಿರುವ ಉಕ್ರೇನ್ ಪ್ರಧಾನಿ ಡೆನಿಸ್ ಶಿಮಿಹಾಲ್, ಮರಿಯುಪೋಲ್ ನಲ್ಲಿ ಈಗಲೂ ನಮ್ಮ ಯೋಧರು ಪ್ರತಿರೋಧ ಮುಂದುವರಿಸಿದ್ದಾರೆ. ನಗರದ ಕೆಲ ಪ್ರದೇಶ ಈಗಲೂ ತಮ್ಮ ಸೇನೆಯ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಈ ಮಧ್ಯೆ, ಲಿವಿವ್ ನಗರದ ಸೇನಾ ನೆಲೆ ಹಾಗೂ ಟೈರ್ ಫ್ಯಾಕ್ಟರಿಗೆ ರಶ್ಯ ಸೇನೆ ಪ್ರಯೋಗಿಸಿದ ಕ್ಷಿಪಣಿ ಅಪ್ಪಳಿಸಿದ್ದು ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿರುವುದಾಗಿ ನಗರದ ಮೇಯರ್ ಹೇಳಿದ್ದಾರೆ. ಉಕ್ರೇನ್ ಪ್ರಜೆಗಳು ತಂಗಿದ್ದ ಹೋಟೆಲ್ ಮೇಲೆ ಮತ್ತೊಂದು ಕ್ಷಿಪಣಿ ಅಪ್ಪಳಿಸಿದ್ದು ಹೋಟೆಲ್ ಗೆ ಹಾನಿಯಾಗಿದೆ. ಅಲ್ಲಿದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ. ಆದರೆ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಇದೆಲ್ಲಾ ಉಕ್ರೇನ್ ನ ಅಪಪ್ರಚಾರದ ಒಂದು ಅಧ್ಯಾಯ ಎಂದು ರಶ್ಯ ಪ್ರತಿಪಾದಿಸಿದೆ.
ರಶ್ಯ ಅಧ್ಯಕ್ಷ ಪುಟಿನ್ ಅಪ್ರಚೋದಿತ ಆಕ್ರಮಣ ನಡೆಸುತ್ತಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳು ಹಾಗೂ ಉಕ್ರೇನ್ ಆರೋಪಿಸಿದೆ.
ರಶ್ಯ ದಾಳಿಯಲ್ಲಿ 7 ನಾಗರಿಕರ ಮೃತ್ಯು; ಮಗು ಸಹಿತ 11 ಮಂದಿಗೆ ಗಾಯ: ಉಕ್ರೇನ್
ಉಕ್ರೇನ್ ನ ಪಶ್ಚಿಮದ ನಗರ ಲೀವ್ ನಲ್ಲಿ ರಶ್ಯ ನಡೆಸಿದ ಬೃಹತ್ ವಾಯುದಾಳಿಯಲ್ಲಿ ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾಗಿದ್ದು 7 ನಾಗರಿಕರು ಮೃತಪಟ್ಟಿದ್ದಾರೆ. ಮಗು ಸಹಿತ 11 ಮಂದಿ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಹಲವಾರು ಜನವಸತಿ ಕಟ್ಟಡಗಳಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ರಾತ್ರಿಯಿಡೀ ವಾಯುದಾಳಿ ಮುಂದುವರಿದಿದ್ದು ದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್ ನಿರಂತರ ಮೊಳಗುತ್ತಿತ್ತು ಎಂದು ಲೀವ್ ನಿವಾಸಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಪೋಲ್ಯಾಂಡ್ ಗಡಿಭಾಗದ ಸನಿಹದಲ್ಲಿರುವ ಲಿವಿವ್ ನಗರ ಯುದ್ಧದ ಮಧ್ಯೆಯೂ ಇದುವರೆಗೆ ಬಹುತೇಕ ಶಾಂತವಾಗಿತ್ತು. ಲಿವಿವ್ ನಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರ ಮತ್ತು ಅಂತರಾಷ್ಟ್ರೀಯ ನೆರವು ಸಮಿತಿಗಳ ಕೇಂದ್ರ ಕಾರ್ಯಾಚರಿಸುತ್ತಿದೆ. ಅಲ್ಲದೆ ಉಕ್ರೇನ್ ರಾಜಧಾನಿ ಕೀವ್ ನಲ್ಲಿದ್ದ ಹಲವು ದೇಶಗಳ ರಾಯಭಾರಿ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಸೇನಾ ಉಪಕರಣಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ರಶ್ಯ ಪ್ರತಿಪಾದಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷರ ವಕ್ತಾರ ಮಿಖಾಯ್ಲಾ ಪೊಡೊಲ್ಯಾಕ್ ‘ ಉಕ್ರೇನ್ ನಗರದ ಮೇಲಿನ ಬರ್ಬರ ವಾಯುದಾಳಿ ಹೆಚ್ಚಿಸಿರುವ ರಶ್ಯ, ಉಕ್ರೇನಿಯನ್ನರನ್ನು ಕೊಲ್ಲುವುದು ತಮ್ಮ ಹಕ್ಕು ಎಂಬ ಸಿನಿಕತನವನ್ನು ಜಗಜ್ಜಾಹೀರುಗೊಳಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಿ ಬ್ರಿಟನ್ ಯೋಧರಿಂದ ಪ್ರಧಾನಿಗೆ ಮನವಿ
ಉಕ್ರೇನ್ ನಲ್ಲಿ ರಶ್ಯದ ಸೇನೆ ಸೆರೆಹಿಡಿದ ಬ್ರಿಟನ್ ನ ಇಬ್ಬರು ಯೋಧರು ಸೋಮವಾರ ರಶ್ಯದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದು ತಮ್ಮ ಬಿಡುಗಡೆಗೆ ಬ್ರಿಟನ್ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಶಾನ್ ಪಿನ್ನರ್ ಮತ್ತು ಎಡನ್ ಆಸ್ಲಿನ್ ರನ್ನು ಮರಿಯುಪೋಲ್ ನಗರದಲ್ಲಿ ರಶ್ಯ ಸೇನೆ ಸೆರೆಹಿಡಿದಿತ್ತು. ಇದೀಗ ಉಕ್ರೇನ್ ಪಡೆಯ ವಶದಲ್ಲಿರುವ ರಶ್ಯ ಪರ ಉದ್ಯಮಿ ವಿಕ್ಟರ್ ಮೆಡ್ವೆಡ್ಚುಕ್ ಅವರೊಂದಿಗೆ ತಮ್ಮನ್ನು ವಿನಿಮಯ ಮಾಡಿಕೊಳ್ಳಲು ಮಧ್ಯಸ್ಥಿಕೆ ವಹಿಸುವಂತೆ ಇವರಿಬ್ಬರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಮನವಿ ಮಾಡಿಕೊಳ್ಳುತ್ತಿರುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ.
ಸೆರೆಸಿಕ್ಕ ಬಳಿಕ ತಮ್ಮೊಂದಿಗೆ ರಶ್ಯ ಸೇನೆ ಉತ್ತಮ ರೀತಿಯಲ್ಲಿ ವ್ಯವಹರಿಸಿದೆ. ತಮಗೇನೂ ತೊಂದರೆ ನೀಡಿಲ್ಲ ಎಂದು ಬ್ರಿಟನ್ ಯೋಧರು ಹೇಳಿರುವ ವೀಡಿಯೊ ಇದಾಗಿದೆ. ಮರಿಯುಪೋಲ್ ನಲ್ಲಿ ಉಕ್ರೇನ್ ನೌಕಾಪಡೆಯ ಜತೆ ಸೇರಿ ಹೋರಾಟ ನಡೆಸುತ್ತಿದ್ದಾಗ ತನ್ನನ್ನು ರಶ್ಯ ಸೇನೆ ಬಂಧಿಸಿದೆ ಎಂದು ಪಿನ್ನರ್ ಹೇಳಿದ್ದರೆ, ಮರಿಯುಪೋಲ್ ನಗರವನ್ನು ರಶ್ಯ ಸೇನೆ ವಶಪಡಿಸಿಕೊಂಡಾಗ ತಾನು ಸೆರೆಸಿಕ್ಕಿರುವುದಾಗಿ ಆಸ್ಲಿನ್ ಹೇಳಿದ್ದಾನೆ ಎಂದು ಬ್ರಿಟನ್ನ ವೆಬ್ಸೈಟ್ ಸ್ಕೈನ್ಯೂಸ್ ವರದಿ ಮಾಡಿದೆ.







