ಪಾಕಿಸ್ತಾನದಲ್ಲಿ ವಿದ್ಯುತ್ ಉತ್ಪಾದನೆಗೆ ಇಂಧನ ಕೊರತೆಯ ಸಮಸ್ಯೆ

Photo: PTI
ಇಸ್ಲಮಾಬಾದ್, ಎ.18: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ವಿದೇಶದಿಂದ ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳಲು ಸಮಸ್ಯೆಯಾಗಿದ್ದು ಇದೀಗ ದೇಶದೆಲ್ಲೆಡೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಉಕ್ರೇನ್ ನಲ್ಲಿನ ಯುದ್ಧದ ಬಳಿಕ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದ ದರ ಗಗನಕ್ಕೇರಿದೆ. ಕಳೆದ 9 ತಿಂಗಳಲ್ಲಿ ಪಾಕಿಸ್ತಾನ ಇಂಧನ ಕ್ಷೇತ್ರಕ್ಕೆ ಮಾಡುವ ವೆಚ್ಚ ದುಪ್ಪಟ್ಟಾಗಿದ್ದು 15 ಬಿಲಿಯನ್ ಡಾಲರ್ ಗೆ ತಲುಪಿದೆ. ಹೆಚ್ಚುವರಿ ಮೊತ್ತ ನೀಡಿ ವಿದೇಶದಿಂದ ಇಂಧನ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಚ್ಛಾವಸ್ತುವಿನ ಕೊರತೆಯಾಗಿದೆ. ಎಪ್ರಿಲ್ 13ಕ್ಕೆ ಅನ್ವಯಿಸುವಂತೆ ಸುಮಾರು 3,500 ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಇಷ್ಟೇ ಪ್ರಮಾಣದ ವಿದ್ಯುತ್ ಪೋಲಾಗುತ್ತಿದೆ. ಹೀಗೆ ಸುಮಾರು 7000 ಮೆಗಾವ್ಯಾಟ್ ನಷ್ಟು ವಿದ್ಯುತ್ ಕೊರತೆಯಾಗಿದೆ ಎಂದು ಪಾಕಿಸ್ತಾನದ ವಿತ್ತಸಚಿವಾಲಯದ ಹೇಳಿಕೆ ತಿಳಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವ ಪಾಕಿಸ್ತಾನ ವಿದೇಶದಿಂದ ಆಮದಾಗುವ ಇಂಧನವನ್ನು ಬಹುತೇಕ ಅವಲಂಬಿಸಿದೆ. ಆದರೆ ಈಗ ಇಂಧನ ದರ ಹೆಚ್ಚುತ್ತಿರುವುದರಿಂದ ಆಮದು ಪ್ರಕ್ರಿಯೆಗೆ ತೊಡಕಾಗಿದ್ದು ಹೆಚ್ಚುವರಿ ಮೊತ್ತ ಪಾವತಿಸಲು ಸಾಧ್ಯವಾಗುತ್ತಿಲ್ಲ. ಜಾಗತಿಕ ಪರಿಸ್ಥಿತಿಯ ಕಾರಣ, ಪಾಕಿಸ್ತಾನದ ಸಮಸ್ಯೆ ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.





