ಭಾರತದ 2000ಕ್ಕೂ ಅಧಿಕ ಸಿಕ್ಖ್ ಯಾತ್ರಿಗಳನ್ನು ಸ್ವಾಗತಿಸಿದ ಪಾಕ್ ಪ್ರಧಾನಿ

ಹೊಸದಿಲ್ಲಿ, ಎ. 18: ಪಾಕಿಸ್ತಾನದಾದ್ಯಂತ ಇರುವ ಸಿಕ್ಖ್ ಪ್ರಾರ್ಥನಾ ಮಂದಿರಗಳಲ್ಲಿ ವಾರ್ಷಿಕ ವೈಶಾಖಿ ಉತ್ಸವ ಆಚರಿಸಲು ಭಾರತದ 2000 ಸಿಕ್ಖ್ ಯಾತ್ರಿಗಳು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದಾರೆ.
‘‘ವೈಶಾಖಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವ ಎಲ್ಲ ಸಿಕ್ಖ್ ಗಣ್ಯರನ್ನು ಸ್ವಾಗತಿಸುತ್ತೇನೆ. ಈ ಪಂಜಾಬಿ ಹಬ್ಬ ಕೇವಲ ಕೊಯ್ಲು ಋತುವಿನ ಆರಂಭಕ್ಕಿಂತ ಹೆಚ್ಚಿನ ಮಹತ್ವವನ್ನು ಸಂಕೇತಿಸುತ್ತದೆ. ಇದು ಭರವಸೆ, ನವೀಕರಣ, ಬೆಳವಣಿಗೆಯ ಸಂಕೇತವಾಗಿದೆ. ಈ ವಸಂತ ಕಾಲದ ಹಬ್ಬವನ್ನು ಆಚರಿಸುವ ಎಲ್ಲರಿಗೂ ಅಭಿನಂದನೆಗಳು’’ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಟ್ವೀಟ್ ಮಾಡಿದ್ದಾರೆ. ವೈಶಾಖಿಯಂದು ಹಸನ್ಅಬ್ದಾಲ್ನ ಗುರುದ್ವಾರ ಪಂಜಾ ಸಾಹಿಬ್ನಲ್ಲಿ ಮುಖ್ಯ ಹಬ್ಬ ನಡೆಯುತ್ತದೆ.
ನಾಂಕನ ಸಾಹಿಬ್ನಂತಹ ಇತರ ಧಾರ್ಮಿಕ ಸ್ಥಳಗಳಿಗೆ ಕೂಡ ಯಾತ್ರಿಗಳು ಭೇಟಿ ನೀಡುತ್ತಾರೆ. ದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ 2200 ವಿಸಾ (ಎಪ್ರಿಲ್ 12ರಿಂದ 21ರ ವರೆಗೆ ಮಾನ್ಯತೆ ಇರುವ)ಗಳನ್ನು ನೀಡಿದೆ. 1974ರ ಧಾರ್ಮಿಕ ಮಂದಿರಗಳಿಗೆ ಭೇಟಿ ಶಿಷ್ಟಾಚಾರದ ಅಡಿಯಲ್ಲಿ ಈ ವಿಸಾಗಳನ್ನು ನೀಡಲಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಿರ್ದಿಷ್ಟ ಧಾರ್ಮಿಕ ಮಂದಿರಗಳಿಗೆ ಭಾರತೀಯರು ಹಾಗೂ ಪಾಕಿಸ್ತಾನಿಗಳು ಭೇಟಿ ನೀಡಲು ಸುಗಮವಾಗುವಂತೆ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಶಿಷ್ಟಾಚಾರದ ಅಡಿಯಲ್ಲಿ ಪಾಕಿಸ್ತಾನದ 15 ಸ್ಥಳಗಳು ಹಾಗೂ ಭಾರತದ 5 ಸ್ಥಳಗಳು ಸೇರಿವೆ.