ಶ್ರೀಲಂಕಾ ಸಚಿವ ಸಂಪುಟ ಪುನರ್ರಚನೆ: ಇಬ್ಬರು ಸಹೋದರರು, ಸೋದರಳಿಯನ್ನು ಕೈಬಿಟ್ಟ ಅಧ್ಯಕ್ಷ
ಕೊಲಂಬೊ, ಎ.18: ಸರಕಾರದ ವಿರುದ್ಧದ ಜನಾಕ್ರೋಶವನ್ನು ತಣಿಸುವ ಕಾರ್ಯಕ್ಕೆ ಮುಂದಾಗಿರುವ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ, ಇದೀಗ ಸಚಿವ ಸಂಪುಟದಿಂದ ತನ್ನ ಇಬ್ಬರು ಸಹೋದರರು ಹಾಗೂ ಸೋದರಳಿಯನನ್ನು ಕೈಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಬಹುತೇಕ ಕುಟುಂಬದ ಸದಸ್ಯರೇ ಇದ್ದ ಸಚಿವ ಸಂಪುಟ ರಚಿಸಿ ಜನರ ಆಕ್ರೋಶ ಮತ್ತು ಟೀಕೆಗೆ ಗುರಿಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ, ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂಬ ಆಗ್ರಹ ವ್ಯಾಪಕವಾಗಿ ಕೇಳಿಬಂದಿತ್ತು. ಸೋಮವಾರ ಪುನರ್ರಚನೆ ಮಾಡಿರುವ ಹೊಸ ಸಚಿವ ಸಂಪುಟದಲ್ಲಿ ಗೊತಬಯ ರಾಜಪಕ್ಸ ಅವರ ಹಿರಿಯ ಸಹೋದರ ಮಹೀಂದ್ರಾ ರಾಜಪಕ್ಸ ಪ್ರಧಾನಿಯಾಗಿಯೇ ಮುಂದುವರಿಯಲಿದ್ದಾರೆ. ಇಬ್ಬರು ಸಹೋದರರಾದ ಚಾಮಲ್ ರಾಜಪಕ್ಸ ಮತ್ತು ಬಾಸಿಲ್ ರಾಜಪಕ್ಸರನ್ನು ಸಂಪುಟದಿಂದ ಕೈಬಿಡಲಾಗಿದೆ. ಕ್ರೀಡಾ ಸಚಿವರಾಗಿದ್ದ ಮಹೀಂದ್ರ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸರನ್ನೂ ಕೈಬಿಡಲಾಗಿದೆ. ಇದರೊಂದಿಗೆ ಸಂಪುಟದಲ್ಲಿನ ಸಚಿವರ ಸಂಖ್ಯೆ 21ಕ್ಕೆ ಇಳಿದಿದೆ(ಈ ಹಿಂದೆ 28 ಸದಸ್ಯರಿದ್ದರು). ಸಚಿವರಿಗೆ ಐಷಾರಾಮಿ ಕಾರು, ಹಲವು ಬೆಂಗಾವಲು ವಾಹನಗಳು, ಅಂಗರಕ್ಷಕರ ತಂಡ, ಅನಿಯಮಿತ ಇಂಧನ, ಮನೆಬಾಡಿಗೆ, ಮನರಂಜನಾ ಭತ್ಯೆ ಇತ್ಯಾದಿ ಸವಲತ್ತುಗಳು ದೊರಕುತ್ತವೆ.
ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಗಜಗಾತ್ರದ ಸಂಪುಟದ ಅಗತ್ಯವಿದೆಯೇ, ಅಲ್ಲದೆ ಸಂಪುಟದಲ್ಲಿನ ಪ್ರಮುಖ ಹುದ್ದೆಗಳನ್ನು ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ನೀಡುವ ಮೂಲಕ ಅಧ್ಯಕ್ಷ ಗೊತಬಯ ರಾಜಪಕ್ಸ ದುರಾಡಳಿತ ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿವೆ. ಇದೀಗ ಈ ಪ್ರತಿಭಟನೆಗೆ ಜನಬೆಂಬಲ ದೊರಕಿದ್ದು ದೇಶದಾದ್ಯಂತ ವ್ಯಾಪಿಸಿದೆ.
ಈ ಮಧ್ಯೆ, ಐಎಂಎಫ್ನಿಂದ ಹೊಸ ಸಾಲ ಪಡೆಯುವ ಕುರಿತ ಮಾತುಕತೆಗೆ ನೂತನ ವಿತ್ತ ಸಚಿವ ಅಲಿ ಸಬ್ರಿ ಈ ವಾರಾಂತ್ಯ ವಾಷಿಂಗ್ಟನ್ಗೆ ಭೇಟಿ ನೀಡಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.







