ಸ್ವೀಡನ್ ನಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ, 26 ಮಂದಿ ಬಂಧನ
ಸ್ಟಾಕ್ಹೋಂ, ಎ.18: ಸ್ವೀಡನ್ನಲ್ಲಿ ಬಲಪಂಥೀಯ ಗುಂಪೊಂದು ಕುರಾನ್ ನ ಪ್ರತಿಯನ್ನು ಹರಿದು ಬೆಂಕಿ ಹಚ್ಚಿರುವುದನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
ನೊರೊಕೊಪಿಂಗ್ ನಗರದಲ್ಲಿ 8 ಮತ್ತು ಲಿಂಕೊಪಿಂಗ್ ನಗರದಲ್ಲಿ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡೆನ್ಮಾರ್ಕ್-ಸ್ವೀಡನ್ ರಾಜಕಾರಣಿ ರಾಸ್ಮಸ್ ಪಲುದಾನ್ ನೇತೃತ್ವದಲ್ಲಿ ವಲಸೆ ವಿರೋಧಿ ಮತ್ತು ಇಸ್ಲಾಂ ವಿರೋಧಿ ಗುಂಪೊಂದು ರ್ಯಾಲಿ ಆಯೋಜಿಸಿತ್ತು. ಮುಸ್ಲಿಮ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಮುಸ್ಲಿಮರ ಪವಿತ್ರ ಕುರಾನ್ ಗ್ರಂಥದ ಪ್ರತಿಯನ್ನು ಸುಟ್ಟುಹಾಕುವುದಾಗಿ ಪಲುದಾನ್ ಘೋಷಿಸಿದ್ದರು. ಅದರಂತೆ ಕುರಾನ್ ಪ್ರತಿಗೆ ಬೆಂಕಿ ಹಚ್ಚಿದ್ದು ಇದನ್ನು ಪ್ರತಿಭಟಿಸುತ್ತಿದ್ದ ಗುಂಪು ಹಿಂಸಾಚಾರದಲ್ಲಿ ತೊಡಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜನರನ್ನು ಚದುರಿಸಲು ಪೊಲೀಸರು ಗೋಲೀಬಾರ್ ನಡೆಸಿದಾಗ 3 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.





