ಅತ್ಯಂತ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಉಮ್ರಾನ್ ಮಲಿಕ್ ಕುರಿತು ಸುನೀಲ್ ಗವಾಸ್ಕರ್ ಹೇಳಿದ್ದೇನು ಗೊತ್ತೆ?

ಹೊಸದಿಲ್ಲಿ: ಐಪಿಎಲ್ ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಉಮ್ರಾನ್ ಮಲಿಕ್ ತನ್ನ ವೇಗದಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ ಹಾಗೂ ಅವರು ಗಂಟೆಗೆ 150 ಕಿ.ಮೀ. ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ರವಿವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಪಂದ್ಯದಲ್ಲಿ, ಮಲಿಕ್ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಮೂರು ವಿಕೆಟ್ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದರು.
ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಉಮ್ರಾನ್ ಭಾರತಕ್ಕಾಗಿ ಆಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
"ಉಮ್ರಾನ್ ಮಲಿಕ್ ಅತ್ಯಂತ ವೇಗದ ಬೌಲಿಂಗ್ ಮೂಲಕ ತುಂಬಾ ಪ್ರಭಾವಬೀರುತ್ತಿದ್ದಾರೆ. ಆದರೆ ಅವರ ವೇಗಕ್ಕಿಂತ ಹೆಚ್ಚಾಗಿ ಅವರ ನಿಖರತೆ ಪರಿಣಾಮಕಾರಿಯಾಗಿದೆ. ಉಮ್ರಾನ್ ಕೆಲವೇ ವೈಡ್ ಎಸೆತಗಳನ್ನು ಬೌಲ್ ಮಾಡುತ್ತಾರೆ. ಅವರು ಲೆಗ್ ಸೈಡ್‌ನಲ್ಲಿ ವೈಡ್‌ಗಳನ್ನು ನಿಯಂತ್ರಿಸಲು ಸಾಧ್ಯವಾದರೆ ಪ್ರಚಂಡ ಬೌಲರ್ ಆಗುತ್ತಾರೆ. ಏಕೆಂದರೆ ಅವರು ಎಲ್ಲಾ ಸಮಯದಲ್ಲೂ ಸ್ಟಂಪ್‌ಗಳ ಮೇಲೆ ದಾಳಿ ಮಾಡುತ್ತಾರೆ ಹಾಗೂ ವೇಗದಿಂದ ನೇರವಾಗಿ ದಾಳಿ ಮಾಡುವುದು ಸುಲಭವಲ್ಲ. ಅವರು ಹೀಗೆಯೇ ಬೌಲ್ ಮಾಡಿದರೆ ಭಾರತಕ್ಕಾಗಿ ಆಡಲಿದ್ದಾರೆ" ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಸ್ಟಾರ್ 'ಸ್ಪೋಟ್ಸ್ನ ಕ್ರಿಕೆಟ್ ಲೈವ್' ಗೆ ತಿಳಿಸಿದ್ದಾರೆ.
ಸನ್ ರೈಸರ್ಸ್ ವೇಗದ ಬೌಲಿಂಗ್ ಕೋಚ್ ಡೇಲ್ ಸ್ಟೇಯ್ನ್ ಕೂಡ ಉಮ್ರಾನ್ ಬೌಲಿಂಗ್ ನಿಂದ ಪ್ರಭಾವಿತರಾಗಿದ್ದಾರೆ. ಉಮ್ರಾನ್ ಅವರು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಉರುಳಿಸಿದಾಗ ಸ್ಟೇಯ್ನ್ ಡಗ್ ಔಟ್ ನಲ್ಲಿ ಮುತ್ತಯ್ಯ ಮುರಳೀಧರನ್ ರೊಂದಿಗೆ ಸಂಭ್ರಮಿಸಿದ್ದರು.