ಪಾಲಕ್ಕಾಡ್ನಲ್ಲಿ ಪಿಎಫ್ಐ ಮುಖಂಡನ ಹತ್ಯೆ ಪ್ರಕರಣ: ಮೂವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ

ಪಾಲಕ್ಕಾಡ್: ಕಳೆದ ಶುಕ್ರವಾರ ಪಾಲಕ್ಕಾಡ್ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸ್ಥಳೀಯ ಮುಖಂಡನೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮೂವರು ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು Indian express ವರದಿ ಮಾಡಿದೆ.
"ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಎಸ್. ಸಂಜಿತ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್ಐ ಮುಖಂಡ ಎ. ಸುಬೈರ್ ಹತ್ಯೆಯಾಗಿದೆ. ಬಂಧಿತರನ್ನು ರಮೇಶ್, ಅರುಮುಘನ್ ಹಾಗೂ ಸರವಣನ್ ಎಂದು ಗುರುತಿಸಲಾಗಿದೆ. ಪಿಎಫ್ಐ ಕಾರ್ಯಕರ್ತರಿಂದ ಹತ್ಯೆಗೀಡಾದ ಸಂಜಿತ್ಗೆ ರಮೇಶ್ ಆಪ್ತನಾಗಿದ್ದ. ಆದ್ದರಿಂದ ಆತ ಸೇಡು ತೀರಿಸಿಕೊಳ್ಳಲು ಬಯಸಿದ್ದ" ಎಂದು ಎಡಿಜಿಪಿ ವಿಜಯ್ ಸಾಖರೆ ಅವರು ಪಾಲಕ್ಕಾಡ್ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ..
ಪಾಲಕ್ಕಾಡ್ನಲ್ಲಿ ಪಿಎಫ್ಐನ ಸ್ಥಳೀಯ ವಲಯದ ಅಧ್ಯಕ್ಷರಾಗಿದ್ದ ಸುಬೈರ್ ಅವರನ್ನು ಕೊಲೆ ಮಾಡಲು ಮೂವರು ಸದಸ್ಯರ ತಂಡ ಒಂದೇ ತಿಂಗಳಲ್ಲಿ ಎರಡು ಬಾರಿ ವಿಫಲ ಪ್ರಯತ್ನಗಳನ್ನು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ತನಗೆ ಏನಾದರೂ ಆದರೆ ಅದಕ್ಕೆ ಪಿಎಫ್ಐ ಮುಖಂಡ ಸುಬೈರ್ ಹೊಣೆ ಎಂದು ಕೊಲೆಯಾಗುವ ಮೊದಲು ಸಂಜಿತ್ ತನ್ನ ಆಪ್ತ ಸ್ನೇಹಿತ ರಮೇಶ್ಗೆ ಹೇಳಿದ್ದ" ಎಂದು ವಿಜಯ್ ಸಾಖರೆ ಹೇಳಿದ್ದಾರೆ.