'ಲವ್ ಜಿಹಾದ್' ಆರೋಪಿಸಲ್ಪಟ್ಟ ಅಂತರ್-ಧರ್ಮೀಯ ಜೋಡಿಗೆ ಕೇರಳ ಹೈಕೋರ್ಟ್ ನಲ್ಲಿ ಗೆಲುವು

ಜೋಯಿಸ್ನಾ ಮತ್ತು ಶೆಜಿನ್ (newindianexpress)
ಕೊಚ್ಚಿ: ಅಂತರ್-ಧರ್ಮೀಯ ಮದುವೆ ಪ್ರಕರಣ ಕೇರಳದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತ ಶೆಜಿನ್ ಹಾಗೂ ಜೋಯಿಸ್ನಾ ಮೇರಿ ಜೋಸೆಫ್ ನಡುವಿನ ಮದುವೆಯನ್ನು 'ಲವ್ ಜಿಹಾದ್' ಎಂದು ಬಿಂಬಿಸಿ ವಿವಾದ ಸೃಷ್ಟಿಸಲಾಗಿತ್ತು. ಈ ಮದುವೆಯ ವಿರುದ್ಧ ಯುವತಿಯ ತಂದೆ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.
ಲವ್ ಜಿಹಾದ್ ವಿವಾದದ ಕೇಂದ್ರ ಬಿಂದುವಾಗಿರುವ ಜೋಯಿಸ್ನಾ ಮೇರಿ ಜೋಸೆಫ್, ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಮಂಗಳವಾರ ಹೇಳಿದ್ದು, ತನ್ನ ಮದುವೆಗೆ ಪೋಷಕರು ಒಪ್ಪಿಗೆ ನೀಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಶೆಜಿನ್ ಎಂಬ ಮುಸ್ಲಿಂ ವ್ಯಕ್ತಿಯೊಂದಿಗಿನ ವಿವಾಹದ ವಿರುದ್ಧ ಜೋಯಿಸ್ನಾ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ ನಂತರ ಆಕೆಯ ಪ್ರತಿಕ್ರಿಯೆ ಬಂದಿದೆ.
"ನಾನು ಪ್ರೀತಿಸಿದ ವ್ಯಕ್ತಿಯನ್ನು ನಾನು ಮದುವೆಯಾದೆ. ನಾನು ಅವನೊಂದಿಗೆ ಹೋಗಬೇಕೆಂದು ಬಯಸಿದ್ದೆ. ನಾನು ಅವನನ್ನು ಇಷ್ಟಪಟ್ಟಿರುವುದರಿಂದ ಅವನೊಂದಿಗೆ ವಾಸಿಸಲು ಪ್ರಾರಂಭಿಸಿದೆ. ನಾನು ನನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ಹೇಳಿದೆ. ಇದು 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತೆಗೆದುಕೊಂಡ ನಿರ್ಧಾರ. ನಮ್ಮ ಪೋಷಕರೊಂದಿಗೆ ಮಾತನಾಡಿ, ನಾವು ಅವರಿಗೆ ಮನವರಿಕೆ ಮಾಡುತ್ತೇವೆ” ಎಂದು ಜೋಯಿಸ್ನಾ ಎಎನ್ಐಗೆ ತಿಳಿಸಿದರು.
ಜೋಯಿಸ್ನಾ ಕ್ರಿಶ್ಚಿಯನ್ ಆಗಿ ಬದುಕಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಜೋಯಿಸ್ನಾ ಪತಿ ಶೆಜಿನ್ ಹೇಳಿದ್ದಾರೆ.
"ತೀರ್ಪು ನಮಗೆ ಅನುಕೂಲಕರವಾಗಲಿದೆ ಎಂದು ನಾವು ಭಾವಿಸಿದ್ದೇವೆ. 18 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ವ್ಯಕ್ತಿಗಳು, ಭಾರತದಲ್ಲಿ ಅವರು ಬಯಸಿದಂತೆ ಬದುಕಲು ಕಾನೂನಿನಲ್ಲಿ ಅನುಮತಿ ಇದೆ. ನಾವಿಬ್ಬರೂ ನನ್ನ ತಂದೆಯ ಸಹೋದರನ ಬಳಿ ಇದ್ದಾಗ ಎಸ್ಡಿಪಿಐ ಕೇಂದ್ರದಲ್ಲಿ ಇದ್ದೇವೆ ಎಂಬ ಆರೋಪವನ್ನು ಹರಡಲಾಯಿತು" ಎಂದು ಅವರು ಹೇಳಿದ್ದಾರೆ.
"ನಾನು ಧಾರ್ಮಿಕ ವಕ್ತಿಯಲ್ಲ. ಜೋಯಿಸ್ನಾ ಕ್ರಿಶ್ಚಿಯನ್ ಆಗಿ ಬದುಕಲು ನನಗೆ ಯಾವುದೇ ಸಮಸ್ಯೆ ಇಲ್ಲ. ಅದು ಅವಳ ವೈಯಕ್ತಿಕ ವಿಷಯ. ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ವಿಷಯದಲ್ಲಿ, ಅವಳು ಹಸ್ತಕ್ಷೇಪ ಮಾಡಲಿಲ್ಲ. ಅದು ಹಾಗೆಯೇ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಸಾಯುವವರೆಗೂ ಎಲ್ಲರೂ ನಮಗೆ ಶಾಂತಿಯಿಂದ ಇರಲು ಅವಕಾಶ ನೀಡಬೇಕು,’’ ಎಂದು ಹೇಳಿದ್ದಾರೆ.
ಹಿಂದಿನ ದಿನ, ಹೈಕೋರ್ಟ್ನ ವಿಭಾಗೀಯ ಪೀಠವು ಜೋಯಿಸ್ನಾಳನ್ನು ಶೆಜಿನ್ನೊಂದಿಗೆ ಕಳುಹಿಸಿತು ಮಹಿಳೆ ನ್ಯಾಯಾಲಯದಲ್ಲಿ ತಾನು ಯಾವುದೇ ಬಂಧನದಲ್ಲಿಲ್ಲ ಎಂದು ಮತ್ತು ಆಕೆಯ ಒಪ್ಪಿಗೆಯೊಂದಿಗೆ ಶೆಜಿನ್ನೊಂದಿಗೆ ಹೋಗಿದ್ದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಜೋಯಿಸ್ನಾ ಅವರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ಆಕೆಯ ತಂದೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.