ಭಾರತೀಯ ಕ್ರಿಕೆಟ್ ಆಡಳಿತ ಎಂಬ ತಂದೆ ಮಕ್ಕಳ ಆಟ !

ಹೊಸದಿಲ್ಲಿ,ಎ.19: ಈ ತಿಂಗಳ ಪೂರ್ವಾರ್ಧದಲ್ಲಿ ಕೇಂದ್ರ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾರ ಪುತ್ರ ಮಹಾಆರ್ಯಮಾನ್ ಸಿಂದಿಯಾ ಅವರು ಗ್ವಾಲಿಯರ್ ಡಿವಿಜನ್ ಕ್ರಿಕೆಟ್ ಅಸೋಸಿಯೇಷನ್(ಜಿಡಿಸಿಎ)ನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜವಂಶವು ನಿಖರವಾಗಿ ರಾಜಕೀಯ ಗೌರವದ ಸಂಕೇತವಾಗಿರದ ಮತ್ತು ಕ್ರಿಕೆಟ್ ಮೈದಾನವು ಹಿಂದೆಂದಿಗಿಂತಲೂ ಹೆಚ್ಚು ಸಮತಟ್ಟಾಗಿರುವ ಈ ಸಮಯದಲ್ಲಿ ಜ್ಯೂ.ಸಿಂದಿಯಾರ ನೇಮಕ ಯಾರನ್ನೂ ಅಚ್ಚರಿಗೊಳಿಸಿಲ್ಲ. ಏಕೆಂದರೆ ಇದು ಕ್ರಿಕೆಟ್ ನ ಆಡಳಿತದಲ್ಲಿ ಪುತ್ರ ತನ್ನ ಪ್ರಭಾವಿ ತಂದೆಯ ಹೆಜ್ಜೆಗಳಲ್ಲಿ ಸಾಗುವ ಭಾರತೀಯ ಕ್ರಿಕೆಟ್ ಮಂಡಳಿಯ ಹಳೆಯ ಸಂಪ್ರದಾಯಕ್ಕೆ ಅನುಗುಣವಾಗಿದೆ ಎಂದು indianexpress.com ವರದಿ ಮಾಡಿದೆ.
ವಾಸ್ತವದಲ್ಲಿ ಇಂದು ಬಿಸಿಸಿಐನ ಪೂರ್ಣ 38 ಸದಸ್ಯರ ಮೂರನೇ ಒಂದು ಭಾಗದಷ್ಟು ಜನರು ಮಾಜಿ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳ ಪುತ್ರರು ಅಥವಾ ಸಂಬಂಧಿಗಳಾಗಿದ್ದು ಉನ್ನತ ಸ್ಥಾನಗಳಲ್ಲಿದ್ದಾರೆ. ಬಿಸಿಸಿಐ ಇತಿಹಾಸದಲ್ಲಿಯೇ ಇದು ಒಂದು ದಾಖಲೆಯಾಗಿದೆ.
ಹಿಂದೆಂದು ಇಷ್ಟೊಂದು ಕ್ರಿಕೆಟ್ ಸಂಘಗಳು ಕುಟುಂಬಗಳ ಆಡಳಿತದಲ್ಲಿರಲಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿದ ಆರ್.ಎಂ.ಲೋಧಾ ಸಮಿತಿಯು ಆತಂಕಗಳನ್ನು ವ್ಯಕ್ತಪಡಿಸಿದ್ದರೂ ಈ ಬೆಳವಣಿಗೆ ಕಂಡುಬಂದಿದೆ.
2016ರಲ್ಲಿ ಬಿಸಿಸಿಐನ ನೂತನ ಸಂವಿಧಾನವನ್ನು ರಚಿಸುವಾಗ ‘ಕೆಲವು ರಾಜ್ಯಗಳಲ್ಲಿ ಎಲ್ಲ ಸದಸ್ಯರು ಕೆಲವೇ ಕುಟುಂಬಗಳಿಗೆ ಅಥವಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ, ತನ್ಮೂಲಕ ಕ್ರಿಕೆಟ್ ಮೇಲಿನ ನಿಯಂತ್ರಣವನ್ನು ಕೆಲವೇ ಜನರ ಕೈಯಲ್ಲಿ ಶಾಶ್ವತಗೊಳಿಸಲಾಗುತ್ತಿದೆ’ ಎಂದು ಸಮಿತಿಯು ಬೆಟ್ಟು ಮಾಡಿತ್ತು. ಆಡಳಿತಗಾರರಿಗೆ 70 ವರ್ಷಗಳ ವಯೋಮಿತಿಯನ್ನು ನಿಗದಿಗೊಳಿಸಿದ್ದ ಅದು, ಆರು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಆಡಳಿತಾಧಿಕಾರಿಗಳು ಮತ್ತೆ ಅಧಿಕಾರಕ್ಕೆ ಏರಲು ಮೂರು ವರ್ಷ ಕಾಯಬೇಕಾದ ನಿಯಮವನ್ನು ಜಾರಿಗೊಳಿಸಿತ್ತು. ಇದು ಕೆಲವು ತಂದೆಯಂದಿರು ತಮ್ಮ ಪುತ್ರರಿಗೆ ಅಧಿಕಾರವನ್ನು ಹಸ್ತಾಂತರಿಸಲು ವೇದಿಕೆಯನ್ನು ಸಜ್ಜುಗೊಳಿಸಿತ್ತು.
ಇಂತಹ ಕೆಲವು ಪ್ರಮುಖರಿಲ್ಲಿದ್ದಾರೆ
►ಜಯ್ ಶಾ: ಬಿಸಿಸಿಐ ಕಾರ್ಯದರ್ಶಿ ಹಾಗೂ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್(ಜಿಸಿಎ)ನ ಮಾಜಿ ಜಂಟಿ ಕಾರ್ಯದರ್ಶಿ
ತಂದೆ: ಅಮಿತ್ ಶಾ,ಮಾಜಿ ಜಿಸಿಎ ಅಧ್ಯಕ್ಷ ಹಾಗೂ ಕೇಂದ್ರ ಗೃಹಸಚಿವ
►ಅರುಣ ಧುಮಾಲ್: ಬಿಸಿಸಿಐ ಖಜಾಂಚಿ
ಸೋದರ: ಅನುರಾಗ್ ಠಾಕೂರ್, ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ಕೇಂದ್ರ ಸಚಿವ
►ಮಹಾಆರ್ಯಮಾನ್ ಸಿಂದಿಯಾ: ಜಿಡಿಸಿಎ ಉಪಾಧ್ಯಕ್ಷ
ತಂದೆ: ಜ್ಯೋತಿರಾದಿತ್ಯ ಸಿಂದಿಯಾ,ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಹಾಗೂ ಚಂಬಲ್ ಡಿವಿಜನ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ
►ಧನರಾಜ ನಾಥ್ವಾನಿ: ಜಿಸಿಎ ಉಪಾಧ್ಯಕ್ಷ
ತಂದೆ: ಪರಿಮಳ ನಾಥ್ವಾನಿ, ಮಾಜಿ ಜಿಸಿಎ ಅಧ್ಯಕ್ಷ
►ಪ್ರಣವ ಅಮೀನ್: ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಅಧ್ಯಕ್ಷ
ತಂದೆ: ಚಿರಾಯು ಅಮೀನ್,ಮಾಜಿ ಬಿಸಿಎ ಅಧ್ಯಕ್ಷ ಹಾಗೂ ಐಪಿಎಲ್ನ ಮಾಜಿ ಮಧ್ಯಂತರ ಅಧ್ಯಕ್ಷ
►ಅಜಿತ್ ಲೇಲೆ: ಬಿಸಿಎ ಕಾರ್ಯದರ್ಶಿ
ತಂದೆ: ದಿ.ಜಯವಂತ ಲೇಲೆ, ಮಾಜಿ ಬಿಸಿಎ ಮತ್ತು ಬಿಸಿಸಿಐ ಕಾರ್ಯದರ್ಶಿ
►ಜಯದೇವ ಶಾ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್ಸಿಎ) ಅಧ್ಯಕ್ಷ
ತಂದೆ: ನಿರಂಜನ ಶಾ,ಮಾಜಿ ಎಸ್ಸಿಎ ಮತ್ತು ಬಿಸಿಸಿಐ ಕಾರ್ಯದರ್ಶಿ
ಅವಿಷೇಕ ದಾಲ್ಮಿಯಾ: ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ
ತಂದೆ: ದಿ.ಜಗಮೋಹನ್ ದಾಲ್ಮಿಯಾ, ಮಾಜಿ ಸಿಎಬಿ, ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷ
►ಸೌರವ್ ಗಂಗೂಲಿ: ಬಿಸಿಸಿಐ ಅಧ್ಯಕ್ಷ. ಸೋದರ ಸ್ನೇಹಶಿಷ್ ಗಂಗೂಲಿ ಸಿಎಬಿಯ ಗೌರವ ಕಾರ್ಯದರ್ಶಿ ಮತ್ತು ಚಿಕ್ಕಪ್ಪ ದೇಬಶಿಷ್ ಗಂಗೂಲಿ ಖಜಾಂಚಿ. ಸೌರವ ಬಿಸಿಸಿಐ ಅಧ್ಯಕ್ಷರಾಗುವ ಮುನ್ನ ಸಿಎಬಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷ ಹುದ್ದೆಗಳನ್ನು ನಿರ್ವಹಿಸಿದ್ದರು.
►ರೋಹನ್ ಜೇಟ್ಲಿ: ದಿಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ)ಅಧ್ಯಕ್ಷ
ತಂದೆ: ದಿ. ಅರುಣ ಜೇಟ್ಲಿ, ಮಾಜಿ ಡಿಡಿಸಿಎ ಅಧ್ಯಕ್ಷ ಮತ್ತು ಐಪಿಎಲ್ ಆಡಳಿತ ಮಂಡಳಿಯ ಮಾಜಿ ಸದಸ್ಯ
►ಅದ್ವೈತ ಮನೋಹರ: ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಅಧ್ಯಕ್ಷ
ತಂದೆ: ಶಶಾಂಕ ಮನೋಹರ,ಮಾಜಿ ವಿಸಿಎ,ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷ
►ಸಂಜಯ ಬೆಹೆರಾ: ಒಡಿಶಾ ಕ್ರಿಕೆಟ್ ಅಸೋಸಿಯೇಷನ್ (ಒಸಿಎ) ಕಾರ್ಯದರ್ಶಿ
ತಂದೆ:ಆಶೀರ್ವಾದ ಬೆಹೆರಾ,ಮಾಜಿ ಒಸಿಎ ಕಾರ್ಯದರ್ಶಿ
►ಮಹಿಮ ವರ್ಮಾ: ಕ್ರಿಕೆಟ್ ಅಸೋಸಿಯೇಷನ್ ಆಫ್ ಉತ್ತರಾಖಂಡ (ಸಿಎಯು) ಕಾರ್ಯದರ್ಶಿ
ತಂದೆ:ಪಿ.ಸಿ.ವರ್ಮಾ,ಮಾಜಿ ಸಿಎಯು ಕಾರ್ಯದರ್ಶಿ
►ನಿಧಿಪತಿ ಸಿಂಘಾನಿಯಾ,ಜೆ.ಕೆ.ಗ್ರೂಪ್: ಯುಪಿ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಅಧ್ಯಕ್ಷ
ಚಿಕ್ಕಪ್ಪ: ದಿ.ಯದುಪತಿ ಸಿಂಘಾನಿಯಾ,ಮಾಜಿ ಯುಪಿಸಿಎ ಅಧ್ಯಕ್ಷ
►ವಿಪುಲ್ ಫಡ್ಕೆ: ಗೋವಾ ಕ್ರಿಕೆಟ್ ಅಸೋಸಿಯೇಷನ್(ಜಿಸಿಎ) ಕಾರ್ಯದರ್ಶಿ
ತಂದೆ: ವಿನೋದ ಫಡ್ಕೆ,ಮಾಜಿ ಜಿಸಿಎ ಕಾರ್ಯದರ್ಶಿ
►ಕೆಚಂಗುಲಿ ರಿಯೊ: ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ (ಎನ್ಸಿಎ) ಅಧ್ಯಕ್ಷ
ತಂದೆ: ನಿಫಿಯೊ ರಿಯೊ,ಮಾಜಿ ಎನ್ಸಿಎ ಅಧ್ಯಕ್ಷ ಹಾಗೂ ನಾಗಾಲ್ಯಾಂಡ್ ಮುಖ್ಯಮಂತ್ರಿ
ಕಾಗದದ ಮೇಲೆ ಈ ಹುದ್ದೆಗಳಿಗೆ ಪ್ರತಿ ಘಟಕದಲ್ಲಿ ಚುನಾವಣೆಗಳ ಮೂಲಕ ಆಯ್ಕೆ ನಡೆಯುತ್ತದೆ. ಆದರೆ ವಾಡಿಕೆಯಲ್ಲಿ ಹಳೆಯ ಆಡಳಿತಾಧಿಕಾರಿಗಳು ತಮ್ಮ ಸುತ್ತಲೂ ಆಪ್ತಕೂಟಗಳನ್ನು ರಚಿಸಿಕೊಂಡಿರುವುದರಿಂದ ಮುಂದಿನ ಪೀಳಿಗೆಗೆ ಅಧಿಕಾರ ಹಸ್ತಾಂತರವು ಸುಗಮವಾಗಿ ಜರುಗುತ್ತದೆ.
ವರ್ಷಗಳಿಂದಲೂ ತಮ್ಮ ಘಟಕಗಳಲ್ಲಿಯ ಎಲ್ಲ ಪ್ರಮುಖ ನೇಮಕಾತಿಗಳನ್ನು ಈ ಜನರೇ ನಿರ್ಧರಿಸಿರುವುದರಿಂದ ಜಿಲ್ಲೆಗಳು ಮತ್ತು ಕ್ಲಬ್ ಗಳ ಮತದಾರರು ಹಾಗೂ ವ್ಯಕ್ತಿಗತ ಸದಸ್ಯರ ಮೇಲೆ ಪ್ರಭಾವ ಹೊಂದಿರುತ್ತಾರೆ ಎಂದು indianexpress.com ವರದಿ ಮಾಡಿದೆ.
ಹೆಚ್ಚಿನ ಘಟಕಗಳು ಖಾಸಗಿ ಕ್ಲಬ್ ಗಳಂತೆ ನಡೆಯುತ್ತಿವೆ, ಹೊರಗಿನವರು ಒಳಗೆ ಸೇರುವುದೇ ಕಠಿಣವಾಗಿದೆ ಎಂದು ಹಿರಿಯ ಬಿಸಿಸಿಐ ಪದಾಧಿಕಾರಿಯೋರ್ವರು ಹೇಳಿದರು.
ಪ್ರಭಾವಿ ರಾಜಕಾರಣಿಗಳ ಪುತ್ರರು ಮತ್ತು ಸಂಬಂಧಿಗಳು ಕಣವನ್ನು ಪ್ರವೇಶಿಸಿದಾಗ ಕೆಲವೊಮ್ಮೆ ಹಳೆಯ ಪಟ್ಟಭದ್ರರು ಅವರಿಗೆ ಅವಕಾಶವನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುತ್ರ ವೈಭವ ಗೆಹ್ಲೋಟ್ ರಾಜ್ಯದಲ್ಲಿ ಕ್ರಿಕೆಟ್ ಉಸ್ತುವಾರಿಯಾಗಿದ್ದಾರೆ.
ಕುಟುಂಬದೊಳಗೆ ಅಧಿಕಾರ ಹಸ್ತಾಂತರವನ್ನು ಸಮರ್ಥಿಸಿಕೊಂಡಿರುವ ಮಾಜಿ ಎಸ್ಸಿಎ ಮತ್ತು ಬಿಸಿಸಿಐ ಕಾರ್ಯದರ್ಶಿ ಧನಂಜಯ ಶಾ ಅವರು, ‘ಯಾರೇ ಆದರೂ ಚುನಾವಣೆಗೆ ನಿಲ್ಲುವುದನ್ನು ತಡೆಯಲು ಯಾರಿಗೆ ಸಾಧ್ಯವಿದೆ? ವ್ಯಕ್ತಿಯೋರ್ವ ಸಮರ್ಥ ಆಡಳಿತಗಾರನಾಗಿದ್ದರೆ ಮತ್ತು ಆಟದ ಬಗ್ಗೆ ಪ್ರತಿಯನ್ನು ಹೊಂದಿದ್ದರೆ ಮತ್ತು ಅಂತಹ ವ್ಯಕ್ತಿ ಮಾಜಿ ಅಧಿಕಾರಿಗೆ ಸಂಬಂಧಿಸಿದ್ದರೆ ಈ ಸಂಬಂಧ ಮುಖ್ಯವಾಗುವುದಿಲ್ಲ. ಲೋಧಾ ಸಮಿತಿಯ ನಿಯಮಗಳಿಂದಾಗಿ ನಾನು ನಿವೃತ್ತನಾಗಿದ್ದೇನೆ. ಆದರೆ ವರ್ಷಗಳಿದಲೂ ಕಟ್ಟಿ ಬೆಳೆಸಿದ ಸಂಸ್ಥೆ ತಪ್ಪು ಕೈಗಳಿಗೆ ಸೇರಬಾರದು. ನನ್ನ ಮಗ (ಜಯದೇವ ಶಾ, ಎಸ್ಸಿಎ ಅಧ್ಯಕ್ಷ) ಮೊದಲ ದರ್ಜೆಯ ಕ್ರಿಕೆಟಿಗನಾಗಿದ್ದಾನೆ, ಆತ ತನ್ನದೇ ಆದ ಗುರುತನ್ನು ರೂಪಿಸಿಕೊಂಡಿದ್ದಾನೆ ಮತ್ತು ಕ್ರಿಕೆಟ್ ಅನ್ನು ಉತ್ತೇಜಿಸಲು ಬಯಸಿದ್ದಾನೆ’ ಎಂದು ಹೇಳಿದರು.







