ಶಿವಮೊಗ್ಗಕ್ಕೆ ಸಿಎಂ ಬೊಮ್ಮಾಯಿ ಭೇಟಿ ಹಿನ್ನಲೆ: ಕಾಂಗ್ರೆಸ್ ಮುಖಂಡರಿಗೆ ಗೃಹ ಬಂಧನ!
ಮನೆಯಿಂದ ಹೊರಬರದಂತೆ ತಾಕೀತು; ಮನೆ ಮುಂದೆ ಪೊಲೀಸರ ನಿಯೋಜನೆ

ಶಿವಮೊಗ್ಗ, ಏ.19: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಹಲವು ಮುಖಂಡರನ್ನು ಗೃಹಬಂಧನದಲ್ಲಿಟ್ಟಿರುವ ಘಟನೆ ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ 6 ಗಂಟೆಗೆಯಿಂದಲೇ ಮುಖಂಡರುಗಳ ಮನೆ ಮುಂದೆ ಹಾಜರಾದ ಪೊಲೀಸರು, ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನೀವು ಇಂದು ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮ ಮುಗಿಯುವ ವರೆಗೂ ಮನೆಯಿಂದ ಹೊರಬರುವಂತಿಲ್ಲ ಎಂದು ತಾಕೀತು ಮಾಡಿದ ಪೊಲೀಸರು, ಮುಖಂಡರ ಮನೆ ಮುಂದೆ ಕುರ್ಚಿ ಹಾಕಿಸಿಕೊಂಡು ಬಾಗಿಲು ಕಾಯುತ್ತಿದ್ದ ದೃಶ್ಯ ಕಂಡು ಬಂದಿದೆ.
ಇತ್ತೀಚೆಗೆ ನಗರದಲ್ಲಿ ನಡೆದ ಹರ್ಷ ಹತ್ಯಾ ಪ್ರಕರಣ, ಹಿಜಾಬ್ ವಿಚಾರಕ್ಕೆ ನಗರದಲ್ಲಿ ಅಶಾಂತಿಯ ವಾತಾವರಣ ಉಂಟಾಗಿತ್ತು. ಕೆ.ಎಸ್. ಈಶ್ವರಪ್ಪನವರು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದು, ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರ ರಾಜೀನಾಮೆ ನಂತರ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತು ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿರುವ ಸಂದರ್ಭದಲ್ಲೇ ಈಶ್ವರಪ್ಪನವರ ಸ್ವಕ್ಷೇತ್ರ ಶಿವಮೊಗ್ಗಕ್ಕೆ ಸಿಎಂ ಆಗಮವಾಗುತ್ತಿರುವುದರಿಂದಾಗಿ ಪ್ರತಿಭಟನೆ ಇನ್ನಷ್ಟು ಕಾವು ಪಡೆದುಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆ ನೆಪದಲ್ಲಿ ಈ ಕ್ರಮ ಅನುಸರಿಸಿದ್ದಾರೆ ಎನ್ನಲಾಗಿದೆ.
ಎನ್.ಎಸ್.ಯು.ಐ. ಪ್ರತಿಭಟನೆ:
ಪೊಲೀಸರು ಪ್ರಮುಖರ ಮನೆಗಳ ಮುಂದೆ ಪೊಲೀಸರನ್ನು ನಿಯೋಜಿಸಿ ಅವರು ಮನೆಯಿಂದ ಹೊರಹೋಗದಂತೆ ತಡೆದರೂ ಕೆಲ ಮುಖಂಡರುಗಳಾದ ಸಿ.ಜಿ.ಮಧುಸೂಧನ್, ವಿಜಯ್, ಚೇತನ್, ಶ್ರೀಜಿತ್, ಗಿರೀಶ್ ಕಾಟಿಕೆರೆ, ಚರಣ್, ಗೌತಮ್ ಮುಂತಾದವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಯುವ ಕಾಂಗ್ರೆಸ್ ವಿರೋಧ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ರಾಜಕೀಯ ಪಕ್ಷಗಳ ಹಕ್ಕು. ಆದರೆ, ಸರ್ಕಾರದ ವೈಪಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುವ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇರಿಸುವುದು ಎಷ್ಟರಮಟ್ಟಿಗೆ ಸರಿ? ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ಮುಖಂಡರಾದ ಎಂ. ಪ್ರವೀಣ್ ಕುಮಾರ್ , ಲೋಕೇಶ್, ಕುಮರೇಶ್ ತಿಳಿಸಿದ್ದಾರೆ.







