ಎಸ್‌ಬಿಐ ಸಾಲದ ಮೇಲಿನ ಬಡ್ಡಿದರ ಶೇ.0.1 ಏರಿಕೆ

ಹೊಸದಿಲ್ಲಿ, ಎ.19: ಎಸ್‌ಬಿಐ ತನ್ನ ಎಲ್ಲ ವಿಧದ ಸಾಲಗಳ ಮೇಲಿನ ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ (ಎಂಸಿಎಲ್‌ಆರ್)ವನ್ನು ಶೇ.0.1ರಷ್ಟು ಹೆಚ್ಚಿಸಿದ್ದು, ನೂತನ ದರಗಳು ಎ.15ರಿಂದ ಜಾರಿಗೊಂಡಿವೆ.
ಸರಳವಾಗಿ ಹೇಳುವುದಾದರೆ ಎಸ್‌ಬಿಐ ಸಾಲಗಳ ಮೇಲೆ ತನ್ನ ಬಡ್ಡಿಯನ್ನು ಶೇ.0.1ರಷ್ಟು ಹೆಚ್ಚಿಸಿದೆ. ಬಡ್ಡಿದರ ಏರಿಕೆಯಿಂದ ಇಎಂಐಗಳು ದುಬಾರಿಯಾಗಲಿವೆ. ಎಂಸಿಎಲ್‌ಆರ್ ಕನಿಷ್ಠ ಸಾಲದರವಾಗಿದ್ದು, ಇದಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲಗಳನ್ನು ನೀಡಲು ಬ್ಯಾಂಕುಗಳಿಗೆ ಅನುಮತಿಯಿಲ್ಲ. ಸಾಲಗಾರ ಸಾಲವನ್ನು ಮರುಪಾವತಿಸಬೇಕಾದ ಗಡುವನ್ನು ಆಧರಿಸಿ ಎಂಸಿಎಲ್‌ಆರ್‌ನ್ನು ಲೆಕ್ಕ ಹಾಕಲಾಗುತ್ತದೆ.
ದೇಶದಲ್ಲಿಯ ಎಲ್ಲ ಸಾಲಗಳಲ್ಲಿ ಐದನೇ ಒಂದರಷ್ಟು ಪಾಲನ್ನು ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಹೊಂದಿದೆ. ಸಾಮಾನ್ಯವಾಗಿ ಸಾಲದರಗಳಿಗೆ ಸಂಬಂಧಿಸಿದಂತೆ ಇತರ ವಾಣಿಜ್ಯ ಬ್ಯಾಂಕುಗಳು ಎಸ್‌ಬಿಐನ್ನೇ ಅನುಸರಿಸುತ್ತವೆ.
ಎಸ್‌ಬಿಐ ತನ್ನ ಒಂದು ವರ್ಷದ ಎಂಸಿಎಲ್‌ಆರ್‌ನ್ನು 10 ಮೂಲ ಅಂಕಗಳಿಂದ ಪರಿಷ್ಕರಿಸಿದ್ದು,ಸಾಲದರವು ಶೇ.7ರಿಂದ ಶೇ.7.1ಕ್ಕೆ ಏರಿಕೆಯಾಗಿದೆ.





