ಹುಬ್ಬಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಮಾಯಕರನ್ನು ಬಂಧಿಸಿಲ್ಲ: ಸಿಎಂ ಬೊಮ್ಮಾಯಿ

ಚಿಕ್ಕಮಗಳೂರು, ಎ.19: 'ಹುಬ್ಬಳ್ಳಿ ಹಿಂಸಾಚಾರ ಘಟನೆ ಸಂಬಂಧ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂಬುದು ಸುಳ್ಳು, ಪೊಲೀಸರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಮಾತ್ರ ಬಂಧಿಸುತ್ತಿದ್ದಾರೆ. ಘಟನೆ ಸಂಬಂಧ ಓರ್ವ ಅಮಾಯಕನನ್ನೂ ಬಂಧಿಸಿಲ್ಲ. ರಾಜ್ಯದಲ್ಲಿ ನಡೆದ ಗಲಭೆ, ಹಿಂಸಾಚಾರ ಪ್ರಕರಣಗಳ ಬಗ್ಗೆ ಸರಕಾರ ಸಾಫ್ಟ್ ಕಾರ್ನರ್ ತೋರಿಲ್ಲ' ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲೆಯ ಶೃಂಗೇರಿ ಪಟ್ಟಣದ ಶಾರದಾಂಬ ದೇವಾಲಯ ಹಾಗೂ ಶೃಂಗೇರಿ ಮಠಕ್ಕೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಹಿಂಸಾಚಾರದಲ್ಲಿ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ವಿರೋಧ ಪಕ್ಷಗಳಿಂದ ಇದಕ್ಕಿಂತ ಬೇರೆ ಏನನ್ನೂ ಆಪೇಕ್ಷಿಸಲು ಸಾಧ್ಯವಿಲ್ಲ. ಅವರು ಇಂತಹ ಸಂದರ್ಭಗಳಲ್ಲಿ ಏನೇನೋ ವ್ಯಾಖ್ಯಾನ ಮಾಡುತ್ತಾರೆ. ಇದು ನಮಗೆ ಮುಖ್ಯವಲ್ಲ, ಆದರೆ ಜನತೆ ಏನು ಹೇಳುತ್ತಾರೋ ಅದೇ ಮುಖ್ಯ. ವಿರೋಧ ಪಕ್ಷಗಳ ಹೇಳಿಕೆ ಮೇಲೆ ತನಿಖೆ ನಡೆಸಲ್ಲ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ಸಂದರ್ಭ ಮನಸಿಗೆ ಬಂದಂತೆ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ವಿವಿಧೆಡೆ ನಡೆದಿರುವ ಗಲಭೆ, ಹಿಂಸಾಚಾರಗಳ ಬಗ್ಗೆ ನಮ್ಮ ಸರಕಾರ ಸಾಫ್ಟ್ ಕಾರ್ನರ್ ತೋರಿಲ್ಲ. ಯಾವ ಕೇಸಿನಲ್ಲಿ ಸಾಫ್ಟ್ ಕಾರ್ನರ್ ಪ್ರದರ್ಶನ ತೋರಿದ್ದೇವೆಂದು ಹೇಳಿ ಎಂದು ಪ್ರಶ್ನಿಸಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸಿನಲ್ಲಿ ತಕ್ಷಣವೇ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಹುಬ್ಬಳ್ಳಿ ಹಿಂಸಾಚಾರದ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ. ಶಿವಮೊಗ್ಗ ಗಲಭೆ ಘಟನೆ ಬಗ್ಗೆಯೂ ಕ್ರಮಕೈಗೊಳ್ಳಲಾಗಿದೆ. ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಪ್ರಕರಣದಲ್ಲೂ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದೇವೆ. ಪೊಲೀಸ್ ಇಲಾಖೆ ಹುದ್ದೆ ನೇಮಕಾತಿ ಹಗರಣವನ್ನು ರಾಜ್ಯ ಸರಕಾರವೇ ತನಿಖೆಗೆ ಆದೇಶಿಸಿದೆ. ಈ ಪ್ರಕರಣಗಳ ಬಗ್ಗೆ ಸಿಎಂ ಖಡಕ್ ಆಗಿಲ್ಲ ಎಂದು ದೂರಿದರೇ ಹೇಗೆ? ಕಡಕ್ ಎಂದರೆ ಏನೆಂದು ವಿರೋಧ ಪಕ್ಷಗಳನ್ನು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.







